ಪ್ರಧಾನಿ ಮೋದಿ ಅವರ ದೂರದೃಷ್ಟಿಯಿಂದಲೇ ಭಾರತ ಪ್ರಕಾಶಿಸುತ್ತಿದೆ: ಸಚಿವ ವಿ.ಸೋಮಣ್ಣ V. Somanna saaksha tv
ಬೆಂಗಳೂರು: ಪ್ರಧಾನಿ ಮೋದಿ ಅವರ ದೂರದೃಷ್ಟಿಯಿಂದಲೇ ವಿಶ್ವಮಟ್ಟದಲ್ಲಿ ಭಾರತ ಪ್ರಕಾಶಿಸುತ್ತಿದೆ. ದೇಶದ ಅಭಿವೃದ್ಧಿಗೆ ಮೋದಿ ಅವರು ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಮಾತನಾಡಿದ್ದಾರೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಬಿಎಂಪಿ ಸಹಯೋಗದೊಂದಿಗೆ ಕೋವಿಡ್-19 ಮೆಗಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೋದಿ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತ ಭದ್ರ ಭಾರತಕ್ಕೆ ಬುನಾದಿ ಹಾಕಿದ್ದಾರೆ ಎಂದು ಪ್ರಧಾನಿ ಮೋದಿ ಅವರನ್ನು ಬಣ್ಣಿಸಿದ್ದಾರೆ. ಅಲ್ಲದೇ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೂಪಿಸಿದ ಯೋಜನೆಗಳ ಪರಿಣಾಮ ಗ್ರಾಮೀಣ ಭಾರತ ಬಲಿಷ್ಠವಾಗಿದೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಮೋದಿ ಅವರ ನಾಯಕತ್ವದಡಿಯಲ್ಲಿ ದೇಶ ಒಗ್ಗೂಡಿ ಹೋರಾಟ ಮಾಡಿದೆ ಎಂದಿದ್ದಾರೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 70 ಸ್ಥಳಗಳಲ್ಲಿ ಕೋವಿಡ್ ಮೆಗಾ ಲಸಿಕೆ ಅಭಿಯಾನ ನಡೆಯುತ್ತಿದೆ. ಬೆಳಗ್ಗೆಯೇ ಆರಂಭವಾದ ಅಭಿಯಾನದಲ್ಲಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ.
ಇನ್ನು ಕ್ಷೇತ್ರದಲ್ಲಿ ವೃದ್ಧರಿಗೆ ಮತ್ತು ಅನಾರೋಗ್ಯ ಪೀಡಿತರಿಗೆ ಅನುಕೂಲವಾಗುವ ರೀತಿಯಲ್ಲಿ ಮೂರು ಮೊಬೈಲ್ ಲಸಿಕಾ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಗಾರ್ಮೆಂಟ್ಸ್ ನೌಕರರು, ಹೊಟೇಲ್ ಕಾರ್ಮಿಕರು ಈ ಮೆಗಾ ಲಸಿಕೆ ಅಭಿಯಾನದಿಂದ ಹೆಚ್ಚಿನ ಲಾಭ ಪಡೆಯಲಿದ್ದಾರೆ. ಲಸಿಕೆ ಪಡೆಯುವ ಮೂಲಕ ನೀವೂ ಸುರಕ್ಷಿತವಾಗಿರಿ, ನಿಮ್ಮವರನ್ನೂ ಸುರಕ್ಷಿತವಾಗಿರಿಸಿ ಎಂದು ಸಚಿವರು ಹೇಳಿದರು.









