ದೇಶದಲ್ಲಿ ನಿರುದ್ಯೋಗ ಸಮಸ್ಯೆಗೆ ಕಾಂಗ್ರೆಸ್ ಕಾರಣ : ಶ್ರೀರಾಮುಲು
ಚಿತ್ರದುರ್ಗ : ದೇಶದಲ್ಲಿ ನಿರುದ್ಯೋಗ ಸಮಸ್ಯೆ ಉದ್ಭವಿಸಲು ಕಾಂಗ್ರೆಸ್ ಕಾರಣವಾಗಿದೆ ಎಂದು ಸಚಿವ ಶ್ರೀ ರಾಮುಲು ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಭಾರತದಲ್ಲಿ ಭ್ರಷ್ಟಾಚಾರ ಹೆಚ್ಚಲು ಹಾಗೂ ದೇಶ ಹಿಂದುಳಿಯಲು ದೇಶ ಪಾತಾಳಕ್ಕೆ ಹೋಗಲು ಕೂಡ ಕಾಂಗ್ರೆಸ್ ಕಾರಣವಾಗಿದೆ ಎಂದು ಆರೋಪಿಸಿದರು.
ಇದೇ ವೇಳೆ ದೇವೇಗೌಡರ “2023ಕ್ಕೆ ನಮ್ಮ ಮನೆ ಬಾಗಿಲಿಗೆ ಎಲ್ಲಾ ಪಕ್ಷಗಳು ಬರಬೇಕಾಗುತ್ತದೆ” ಎಂಬ ಹೇಳಿಕೆಗೆ ಟಾಂಗ್ ನೀಡಿದ ರಾಮುಲು, ಜೆಡಿಎಸ್ ಹಾಗೂ ಹೆಚ್‍ಡಿಕೆ ಒಳ್ಳೆಯ ಕೆಲಸ ಮಾಡಿದ್ದಾರೆ.
ಆದರೆ ಅವರೊಂದಿಗೆ ಹೋಗುವ ವಿಚಾರವನ್ನು ನಮ್ಮ ರಾಷ್ಟ್ರೀಯ ನಾಯಕರು ಮುಂದೆ ತೀರ್ಮಾನ ಕೈಗೊಳ್ಳುತ್ತಾರೆ.
ಆದರೆ ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಕೂಡದೆಂಬ ಸ್ಪಷ್ಟತೆಯಿದೆ. ಆಗ ಅಂತಹ ಸಂದರ್ಭ ಬಂದರೆ ದೇವೇಗೌಡರನ್ನು ಕೇಳುವುದರಲ್ಲಿ ತಪ್ಪಿಲ್ಲ ಎಂದು ಹೇಳಿದರು.
ಇದೇ ವೇಳೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ ರಾಮುಲು, ಅದಕ್ಕೆ ದಿಕ್ಸೂಚಿ ಎಂಬಂತೆ ನಗರ ಪಾಲಿಕೆ ಚುನಾವಣೆಯ ಫಲಿತಾಂಶ ನಮ್ಮ ಮುಂದೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.









