ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಭಾರತ ಕ್ರಿಕೆಟ್ ತಂಡಕ್ಕೆ ಭಾರೀ ಆಘಾತ ಉಂಟಾಗಿದೆ. ಸುಮಾರು ಮೂರುವರೆ ವರ್ಷಗಳಿಂದ ನಂಬರ್ ಒನ್ ಸ್ಥಾನದಲ್ಲಿ ಭದ್ರವಾಗಿದ್ದ ಟೀಂ ಇಂಡಿಯಾ ನೂತನ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ.
ಒಟ್ಟು 116 ಅಂಕದೊಂದಿಗೆ ಆಸ್ಟ್ರೇಲಿಯಾ ತಂಡ ಟೆಸ್ಟ್ ರ್ಯಾಂಕಿಂಗ್ ನಲ್ಲಿ ನಂಬರ್ ಒನ್ ಸ್ಥಾನಕ್ಕೇರಿದ್ದರೆ, ಎರಡನೇ ಸ್ಥಾನದಲ್ಲಿ 115 ಅಂಕಗಳೊಂದಿ ನ್ಯೂಜಿಲೆಂಡ್ ತಂಡವಿದೆ.
ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದು ಕಳೆದ 2016 ರಿಂದ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಇತ್ತು. ಆದರೆ, ಈಗ ಮೂರುವರೆ ವರ್ಷಗಳ ಬಳಿಕ ಮೂರನೇ ಸ್ಥಾನಕ್ಕೆ ಕುಸಿದಿದೆ.
ಐಸಿಸಿ ನಿಯಮಗಳ ಪ್ರಕಾರ 2016-17ರಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿತ್ತು. ಆ ದಾಖಲೆ ತೆಗೆದು ಹಾಕಿದ್ದರಿಂದ ಟೀಂ ಇಂಡಿಯಾ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ. ಹೀಗಾಗಿ 2016ರ ಬಳಿಕ ಆಸ್ಟ್ರೇಲಿಯಾ ಮತ್ತೊಮ್ಮೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ.
2016-17 ರಲ್ಲಿ ಭಾರತ 12 ಟೆಸ್ಟ್ ಪಂದ್ಯಗಳನ್ನು ಆಡಿತ್ತು. ಇದರಲ್ಲಿ ಕೇವಲ ಒಂದು ಟೆಸ್ಟ್ ಮ್ಯಾಚ್ ನಲ್ಲಿ ಮಾತ್ರ ಸೋಲುಂಡಿತ್ತು. ಆದರೆ, ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ.
ಇನ್ನೂ ಐಸಿಸಿ ಟಿ-20 ರ್ಯಾಂಕಿಂಗ್ ನಲ್ಲೂ ಆಸ್ಟ್ರೇಲಿಯಾ 278 ಪಾಯಿಂಟ್ ಹೊಂದಿ ಅಗ್ರಸ್ಥಾನಕ್ಕೇರಿದೆ. ಎರಡನೇ ಸ್ಥಾನದಲ್ಲಿ 268 ಅಂಕದೊಂದಿಗೆ ಇಂಗ್ಲೆಂಡ್ ತಂಡವಿದ್ದರೆ, ಭಾರತ 266 ಪಾಯಿಂಟ್ ಹೊಂದಿ ಮೂರನೇ ಸ್ಥಾನದಲ್ಲಿದೆ.
ಇತ್ತ ಏಕದಿನ ರ್ಯಾಂಕಿಂಗ್ ನಲ್ಲಿ 127 ರೇಟಿಂಗ್ ಹೊಂದಿ ಇಂಗ್ಲೆಂಡ್ ಟಾಪ್ ಒಂದರಲ್ಲಿದೆ. ಭಾರತ 119 ರೇಟಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿದೆ.