ಹೈದರಾಬಾದ್ : ಹೆಮ್ಮಾರಿ ಕೊರೊನಾ ವೈರಸ್ ದೇಶದಾದ್ಯಂತ ಆರ್ಭಟಿಸುತ್ತಿದ್ದು, ಕ್ಷಿಪ್ರಗತಿಯಲ್ಲಿ ತನ್ನ ಕಬಂದ ಬಾಹುಗಳನ್ನು ಚಾಚುತ್ತಾ ಸಾಗಿದೆ. ಇದರ ಮಧ್ಯೆ ಮಹಾಮಾರಿ ಕೊರೊನಾ ವೈರಸ್ ನಿಂದ ತನ್ನ ಗ್ರಾಮವನ್ನು ರಕ್ಷಿಸಿಕೊಳ್ಳಲು ಕಳೆದ ಒಂದು ತಿಗಳಿಂದ ತೆಲಂಗಾಣದ ಅಖಿಲಾ ಎಂಬ ಯುವ ರೈತಮಹಿಳೆಯೊಬ್ಬಳು ಟೊಂಕಕಟ್ಟಿ ನಿಂತಿದ್ದಾರೆ.
ನಲ್ಗೊಂಡ ಜಿಲ್ಲೆಯ ಚಿಂತಪಲ್ಲಿ ಮಂಡಲ ವ್ಯಾಪ್ತಿಯಲ್ಲಿ ಬರುವ ಮದನಪುರಂ ಅಖಿಲಾ ಅವರ ಗ್ರಾಮವಾಗಿದೆ. ಈ ಗ್ರಾಮ ನೀರಾ ಇಳಿಸುವ ಕೇಂದ್ರವಾಗಿದೆ. ಹೀಗಾಗಿ ಲಾಕ್ ಡೌನ್ ನಿಂದ ಮದ್ಯ ಮಾರಾಟ ನಿಲ್ಲಿಸಿರುವುದರಿಂದ ನೀರಾಗಾಗಿ ಸೋಂಕಿನ ಭೀತಿಯಿಲ್ಲದೇ ಗ್ರಾಮಕ್ಕೆ ದಾಂಗುಡಿ ಇಡುತ್ತಿದ್ದರು. ಇದನ್ನು ತಡೆಯಲು ಅಖಿಲಾ ಗ್ರಾಮ ಪ್ರವೇಶ ದ್ವಾರದಲ್ಲಿ ಅಡ್ಡಗೋಡೆಯಾಗಿ ನಿಂತಿದ್ದಾರೆ.
ಅಖಿಲಾ ಅವರ ಕೆಲಸಕ್ಕೆ ತಂದೆ ಅಕ್ರಮ್ ಯಾದವ್ ಸಹ ಸಾಥ್ ನೀಡಿದ್ದು, ನಸುಕಿನ ಸಮಯದಲ್ಲೇ ಗ್ರಾಮದ ಪ್ರವೇಶ ದ್ವಾರದ ಬಳಿ ಹೋಗಿ, ದಿನವಿಡಿ ಗ್ರಾಮವನ್ನು ಕಾಯುತ್ತಾರೆ.
ಈ ಬಗ್ಗೆ ಮಾತನಾಡಿರುವ ಅಖಿಲಾ, ಹೊರಗಿನವರನ್ನು ತಡೆಯುವುದು ನಿಜಕ್ಕೂ ಕಷ್ಟಕರವಾಗಿದೆ. ನೀರಾಗಾಗಿ ಹೈದರಾಬಾದ್ ನಿಂದಲೂ ನಲ್ಗೊಂಡ ಬರುತ್ತಿದ್ದಾರೆ. ನೀರಾ ತಯಾರಿಸಬೇಡಿ ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿದ್ದೇವೆ. ಆದರೂ ಬೇರೆ ಗ್ರಾಮದ ಜನರು ನಿರಂತರವಾಗಿ ಬರುತ್ತಿದ್ದಾರೆ. ಇದೀಗ ರಕ್ಷಣೆ ಮಾಡುತ್ತಿದ್ದರೂ ಕೆಲವು ಬೇರೆ ದಾರಿಯನ್ನು ಕಂಡುಕೊಂಡಿದ್ದಾರೆ. ಕೆಲವು ಮಾಹಿತಿಗಾರರನ್ನು ಇಟ್ಟಿದ್ದು, ಅವರ ಮಾಹಿತಿಯಂತೆ ಗ್ರಾಮ ಪ್ರವೇಶಿಸುವವರನ್ನು ಪತ್ತೆ ಹಚ್ಚಿ ಹೊರಗಡೆ ಹಾಕುತ್ತಿದ್ದೇವೆ. ನಾವು ತುಂಬಾ ಕಠಿಣವಾಗಿ ನಡೆದುಕೊಳ್ಳುತ್ತಿದ್ದೇವೆ ಎಂಬುದು ತಿಳಿದಿದೆ. ಆದರೂ ಇದು ಅವಶ್ಯಕ ಎಂದು ತಿಳಿಸಿದ್ದಾರೆ.








