ಹಾರ್ದಿಕ್ – ಪೊಲಾರ್ಡ್ ಆರ್ಭಟ.. ಕ್ಯಾಚ್ ಕೈ ಚೆಲ್ಲಿ ಪಂದ್ಯ ಸೋತ ಪಂಜಾಬ್ ಕಿಂಗ್ಸ್..!
ಪಿಚ್ ಸ್ಲೋ ಇತ್ತು. ರನ್ ಗಳಿಸುವುದು ಸವಾಲಾಗಿತ್ತು. ಆದರೆ ಮುಂಬೈ ಫೀಲ್ಡಿಂಗ್ ಪಂಜಾಬ್ಗಿಂತ ಮೇಲ್ಮಟ್ಟದಲ್ಲಿತ್ತು. ಹೀಗಾಗಿ ಪಂದ್ಯದಲ್ಲಿ ಗೆಲುವು ಮುಂಬೈ ಪಾಲಾಯಿತು. 6 ವಿಕೆಟ್ಗಳ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಪ್ಲೇ-ಆಫ್ ರೇಸ್ನಲ್ಲಿ ಕಾಣಿಸಿಕೊಂಡಿತು.
ಬ್ಯಾಟಿಂಗ್ ಆರಂಭಿಸಿದ ಕಿಂಗ್ಸ್ ಪಂಜಾಬ್ಗೆ ಎಂದಿನ ಸ್ಪೋಟಕ ಆರಂಭ ಸಿಗಲಿಲ್ಲ. ಮುಂಬೈ ಬೌಲರ್ಗಳು ಟೈಟ್ ಲೈನ್ ಅಂಡ್ ಲೆಂಗ್ತ್ ಮೂಲಕ ಕೆ.ಎಲ್. ರಾಹುಲ್ ಮತ್ತು ಮಂದೀಪ್ ಸಿಂಗ್ರನ್ನು ಕಟ್ಟಿ ಹಾಕಿದರು. ಮೊದಲ 6 ಓವರುಗಳಲ್ಲಿ 38 ರನ್ ಬಂದರೂ, ಕೃನಾಲ್ ಪಾಂಡ್ಯಾ 15 ರನ್ಗಳಿಸಿದ್ದ ಮಂದೀಪ್ ಸಿಂಗ್ರನ್ನು ಎಲ್ ಬಿ ಬಲೆಗೆ ಕೆಡವಿ ಆಗಿತ್ತು. ಕ್ರಿಸ್ಗೇಲ್ ಪಂಜಾಬ್ ನೆರವಿಗೆ ಬರುತ್ತಾರೆ ಅನ್ನುವ ನಿರೀಕ್ಷೆ ಇತ್ತು. ಆದರೆ 7ನೇ ಓವರ್ನಲ್ಲಿ ದಾಳಿಗಿಳಿದ ಕೈರಾನ್ ಪೊಲ್ಲಾರ್ಡ್ ಮೊದಲು 1 ರನ್ಗಳಿಸಿದ್ದ ಗೇಲ್ರನ್ನು ಲಾಂಗ್ಆನ್ನಲ್ಲಿದ್ದ ಹಾರ್ಧಿಕ್ ಪಾಂಡ್ಯಾ ಕೈಗೆ ಕ್ಯಾಚ್ ಕೊಡುವಂತೆ ಮಾಡಿದರು. ಅದೇ ಓವರ್ನಲ್ಲಿ21 ರನ್ಗಳಿಸಿದ್ದ ರಾಹುಲ್ ಶಾರ್ಟ್ ಫೈನ್ಲೆಗ್ನಲ್ಲಿದ್ದ ಬುಮ್ರಾಗೆ ಕ್ಯಾಚ್ ನೀಡಿದ್ದು ಪಂಜಾಬ್ಗೆ ಶಾಕ್ ನೀಡಿತ್ತು. 2 ರನ್ಗಳಿಸಿದ್ದ ನಿಕೊಲಸ್ ಪೂರನ್ ಬುಮ್ರಾ ಎಸೆತದಲ್ಲಿ ವಿಕೆಟ್ ಒಪ್ಪಿಸಿದಾಗ ಪಂಜಾಬ್ ಖಾತೆಯಲ್ಲಿ ಇದ್ದಿದ್ದು ಕೇವಲ 48 ರನ್.
ಏಡಿಯನ್ ಮಾರ್ಕ್ರಾಂ ಮತ್ತು ದೀಪಕ್ ಹೂಡ್ ಇನ್ನಿಂಗ್ಸ್ ರಿಪೇರಿ ಮಾಡಲು ಹೊರಟರು. ಬೌಂಡರಿಗಳ ಸಂಖ್ಯೆ ಕಡಿಮೆ ಇದ್ದರೂ ಸಿಂಗಲ್ಸ್ ಮತ್ತು ಡಬಲ್ಸ್ ಮೂಲಕ ರನ್ಗಳಿಸಿದರು. ಈ ಜೋಡಿ 61 ರನ್ ಸೇರಿಸಿತ್ತು. ಈ ಹಂತದಲ್ಲಿ ರಾಹುಲ್ ಚಹರ್ 29 ಎಸೆತಗಳಲ್ಲಿ 42 ರನ್ ಸಿಡಿಸಿ ಅಪಾಯಕಾರಿಯಾಗಿ ಕಾಣುತ್ತಿದ್ದ ಮಾರ್ಕ್ ರಾಂರನ್ನು ಕ್ಲೀನ್ ಬೌಲ್ಡ್ ಮಾಡಿದರು.
ಸ್ಲಾಗ್ ಓವರುಗಳಲ್ಲಿ ಪಂಜಾಬ್ ರನ್ ಬೇಟೆಗೆ ಮುಂಬೈ ಬೌಲರ್ಗಳು ಕಡಿವಾಣ ಹಾಕಿದರು. ಅಲ್ಲದೆ 28 ರನ್ಗಳಿಸಿದ ದೀಪಕ್ ಹೂಡ ಕೂಡ ಔಟಾದರು. 20 ಓವರುಗಳಲ್ಲಿ ಪಂಜಾಬ್ 6 ವಿಕೆಟ್ ಕಳೆದುಕೊಂಡು 135 ರನ್ಗಳಿಸಿತ್ತು. ಮುಂಬೈ ಪರವಾಗಿ ಬುಮ್ರಾ ಮತ್ತು ಪೊಲ್ಲಾರ್ಡ್ ತಲಾ 2 ವಿಕೆಟ್ ಪಡೆದರು.
ಗುರಿ ಬೆನ್ನಟ್ಟ ಹೊರ ಮುಂಬೈ ಇಂಡಿಯನ್ಸ್ ಕೂಡ ಉತ್ತಮ ಆರಂಭ ಪಡೆಯಲಿಲ್ಲ. 4ನೇ ಓವರ್ನಲ್ಲಿ ರವಿ ಬಿಷ್ಣೋಯಿ ಮುಂಬೈಗೆ ಡಬಲ್ ಶಾಕ್ ನೀಡಿದ್ರು. ಮೊದಲು ರೋಹಿತ್ ಶರ್ಮಾ ವಿಕೆಟ್ ಪಡೆದ ಬಿಷ್ಣೋಯಿ, ಮುಂದಿನ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ವಿಕೆಟ್ ಕಬಳಿಸಿ ಹಾಲಿ ಚಾಂಪಿಯನ್ನರ ವಿಶ್ವಾಸಕ್ಕೆ ಪೆಟ್ಟು ನೀಡಿದರು.
ಕ್ವಿಂಟಾನ್ ಡಿ ಕಾಕ್ ಮತ್ತು ಸೌರಭ್ ತಿವಾರಿ ಮುಂಬೈ ತಂಡವನ್ನು ಕಾಪಾಡುವ ಲೆಕ್ಕಾಚಾರದಲ್ಲಿದ್ದರು. ಬೇಕಾಗಿದ್ದ ರನ್ರೇಟ್ ಅನ್ನು ಸರಿದೂಗಿಸುವ ಪ್ರಯತ್ನ ಮಾಡಿದರು. ಈ ಹಂತದಲ್ಲಿ ದಾಳಿಗಿಳಿದ ಮೊಹಮ್ಮದ್ ಶಮಿ 29 ರನ್ಗಳಿಸಿದ್ದ ಕ್ವಿಂಟಾನ್ ಡಿ ಕಾಕ್ ವಿಕೆಟ್ ಕಬಳಿಸಿ ಪಂಜಾಬ್ಗೆ ಬ್ರೇಕ್ ತಂದುಕೊಟ್ಟರು.
ಸೌರಭ್ ತಿವಾರಿ ಜೊತೆ ಸೇರಿದ ಹಾರ್ದಿಕ್ ಪಾಂಡ್ಯಾ ಮತ್ತೊಂದು ಜೊತೆಯಾಟ ಕಟ್ಟಲು ಶುರು ಮಾಡಿದರು. ಈ ಜೋಡಿ ಮುಂಬೈ ಗೆಲುವನ್ನು ಜೀವಂತವಾಗಿರಿಸಿತು. ಆದರೆ 16ನೇ ಓವರ್ನಲ್ಲಿ ದಾಳಿಗಿಳಿದ ನಾಥನ್ ಎಲ್ಲಿಸ್ 37 ಎಸೆತಗಳಲ್ಲಿ 45 ರನ್ಗಳಿಸಿದ ತಿವಾರಿ ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ನೀಡಿದರು. ಈ ಹಂತದಲ್ಲಿ ಮುಂಬೈ ಗೆಲುವು ಕಷ್ಟದಲ್ಲಿತ್ತು. ಆದರೆ ಹಾರ್ದಿಕ್ ಜೊತೆ ಸೇರಿದ ಕೈರಾನ್ ಪೊಲ್ಲಾರ್ಡ್ ಲೆಕ್ಕಾಚಾರವೇ ಬೇರೆಯಾಗಿತ್ತು. ಪಂಜಾಬ್ ಬೌಲರ್ಗಳನ್ನು ದಂಡಿಸಿದ ಪೊಲ್ಲಾರ್ಡ್ ಮತ್ತು ಹಾರ್ದಿಕ್ ಜೋಡಿ ಪಂದ್ಯವನ್ನೇ ಗೆದ್ದು ಬೀಗಿತು. 19 ಓವರುಗಳಲ್ಲಿ ಗುರಿ ಮುಟ್ಟಿದ ಮುಂಬೈ ಯುಎಇನಲ್ಲಿ ಮೊದಲ ಜಯ ದಾಖಲಿಸಿತು. ಹಾರ್ದಿಕ್ ಪಾಂಡ್ಯಾ ಅಜೇಯ 40 ರನ್ಗಳಿಸಿದರೆ, ಪೊಲ್ಲಾರ್ಡ್ ಅಜೇಯ 15 ರನ್ಗಳಿಸಿದರು. ಈ ಗೆಲುವಿನ ಮೂಲಕ ಮುಂಬೈ ತನ್ನ ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.








