ಐಪಿಎಲ್ ಪಂದ್ಯಗಳು ರೋಚಕತೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿವೆ. ಈ ಮಧ್ಯೆ ಟಿ20 ವಿಶ್ವಕಪ್ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಗೆ ಯುಎಇ ಮತ್ತು ಒಮನ್ ದೇಶಗಳು ಆತಿಥ್ಯ ನೀಡಲಿವೆ.
ಚುಟುಕು ವಿಶ್ವಕಪ್ ಅಕ್ಟೋಬರ್ 17ರಿಂದ ಆರಂಭವಾಗಲಿದೆ. ಚುಟುಕು ವಿಶ್ವಕಪ್ ಪಂದ್ಯವನ್ನು ಮೈದಾನದಲ್ಲೇ ವೀಕ್ಷಿಸಲು ಎರಡು ದೇಶಗಳ ಸರ್ಕಾರಗಳು ಅನುಮತಿ ನೀಡಿವೆ.
ಮೈದಾನದ ಸಾಮರ್ಥ್ಯದ ಶೇಕಡಾ 70 ರಷ್ಟು ಜನರಿಗೆ ವೀಕ್ಷಣೆ ಮಾಡಲು ಅವಕಾಶವಿದೆ. ಐಸಿಸಿ ಈಗಾಗಲೇ ಟಿಕೆಟ್ ಮಾರಾಟ ಪ್ರಕ್ರಿಯೆಯನ್ನು ಕೂಡ ಆರಂಭಿಸಿದೆ. ಆನ್ಲೈನ್ ಟಿಕೆಟ್ಗಳು ಮಾರಾಟವಾಗುತ್ತಿವೆ.
ವಿಶ್ವಕಪ್ ಇರಲಿ, ಅಥವಾ ಬೇರೆ ಯಾವುದೇ ಪಂದ್ಯ ಇರಲಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಮ್ಯಾಚ್ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುತ್ತದೆ. ಟಿ20 ವಿಶ್ವಕಪ್ನಲ್ಲಿ ಇಂಡೋ-ಪಾಕಿಸ್ತಾನ ಮ್ಯಾಚ್ ಅಕ್ಟೋಬರ್ 24ರಂದು ನಡೆಯಲಿದೆ.
ಅಚ್ಚರಿ ಅಂದ್ರೆ ಟಿಕೆಟ್ ಮಾರಾಟ ಆರಂಭಿಸಿದ ಒಂದೇ ಒಂದು ಗಂಟೆಯಲ್ಲಿ ಈ ಪಂದ್ಯದ ಟಿಕೆಟ್ ಸೋಲ್ಡ್ಔಟ್ ಆಗಿದೆ. ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.
ಜನರಲ್, ಜನರಲ್ ಈಸ್ಟ್, ಪ್ರೀಮಿಯಂ, ಪೆವಿಲಿಯನ್ ಈಸ್ಟ್ ಮತ್ತು ಪ್ಲಾಟಿನಂ ಸೇರಿದಂತೆ ಎಲ್ಲ ವಿಭಾಗದ ಟಿಕೆಟ್ಗಳು ಸೋಲ್ಡ್ ಆಗಿದ್ದು, ಯಾವುದೇ ಟಿಕೆಟ್ ವೆಬ್ಸೈಟ್ಗಳಲ್ಲಿ ಲಭ್ಯವಿಲ್ಲ. ಇದರ ಮಧ್ಯೆ ಅನೇಕರು ಟಿಕೆಟ್ ಖರೀದಿ ಮಾಡಲು ಸಾಧ್ಯವಾಗದೇ ನಿರಾಸೆಗೊಳಗಾಗಿದ್ದಾರೆ.
ಒಮಾನ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಪ್ರಾಥಮಿಕ ಸುತ್ತಿನ ಪಂದ್ಯಗಳಿಗೆ 3 ಸಾವಿರದಷ್ಟು ವೀಕ್ಷಕರಿಗೆ ಅವಕಾಶ ನೀಡಲಾಗುವುದು ಎಂದು ಐಸಿಸಿ ತಿಳಿಸಿದೆ.
ಅಲ್ಲೀಗ ಶಹೀನ್ ಚಂಡಮಾರುತ ಬೀಸುತ್ತಿದ್ದು, ಸ್ಟೇಡಿಯಂಗಳಿಗೂ ಸಾಕಷ್ಟು ಹಾನಿ ಉಂಟು ಮಾಡಿದ ಬಗ್ಗೆ ವರದಿಯಾಗಿದೆ. ಒಮಾನ್ ಪ್ರವೇಶಿಸುವ ಹಾಗೂ ಇಲ್ಲಿಂದ ತೆರಳುವ ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯವಾಗಿದೆ.
ಅಕ್ಟೋಬರ್ 17ರಿಂದ ಐಸಿಸಿ ಟಿ20 ವಿಶ್ವಕಪ್ ಪ್ರಾರಂಭವಾಗುತ್ತದೆ. ಮೊದಲ ಸುತ್ತಿನ ಪಂದ್ಯಾವಳಿ ಹಾಗೂ ಸೂಪರ್-12 ಪಂದ್ಯಾವಳಿ ನಡೆಯುತ್ತವೆ. ಟಿ20 ಕ್ರಿಕೆಟ್ನ ಟಾಪ್-8 ತಂಡಗಳು ನೇರವಾಗಿ ಸೂಪರ್-12 ಹಂತಕ್ಕೆ ಅರ್ಹತೆ ಪಡೆದಿವೆ.
ಮೊದಲ ಸುತ್ತಿನಲ್ಲಿ ಎಂಟು ತಂಡಗಳು ಎರಡು ಗುಂಪುಗಳಾಗಿ ಸ್ಪರ್ಧಿಸಲಿದ್ದು, ಅದರಲ್ಲಿ ನಾಲ್ಕು ತಂಡಗಳು ಸೂಪರ್-12 ಹಂತಕ್ಕೆ ಪ್ರವೇಶ ಪಡೆಯುತ್ತವೆ. ಸೂಪರ್-12 ಸುತ್ತಿನಲ್ಲಿ ಮೊದಲೇ ಇದ್ದ 8 ತಂಡಗಳು ಸೇರಿ ಒಟ್ಟು 12 ತಂಡಗಳು ಸೆಣಸುತ್ತವೆ. ಅಲ್ಲಿಯೂ ಎರಡು ಗುಂಪುಗಳಾಗಿ ವಿಭಜಿಸಲಾಗಿದೆ. ಅಕ್ಟೋಬರ್ 23ರಿಂದ ಸೂಪರ್-12 ಹಂತದ ಪಂದ್ಯಗಳು ನಡೆಯುತ್ತವೆ.









