ನವದೆಹಲಿ : ಕನ್ನಡಿಗ, ಟೀಂ ಇಂಡಿಯಾ ನಯಾ ಸೆನ್ಸೇಷನ್ ಕೆ.ಎಲ್.ರಾಹುಲ್ ಭಾರತ ಕ್ರಿಕೆಟ್ ತಂಡದ ಮುಂದಿನ ನಾಯಕ ಎಂದು ಭಾರತದ ವೇಗದ ಬೌಲರ್ ಎಸ್.ಶ್ರೀಶಾಂತ್ ಭವಿಷ್ಯ ನುಡಿದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಎಸ್.ಶ್ರೀಶಾಂತ್, ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮಾ ನಂತರ ಕೆ.ಎಲ್.ರಾಹುಲ್ ಟೀಂ ಇಂಡಿಯಾದ ನಾಯಕನಾಗುವ ಸಾಮರ್ಥ್ಯ ಹೊಂದಿದ್ದಾರೆ ಎಂದಿದ್ದಾರೆ. ಜೊತೆಗೆ ತಮ್ಮ ಭವಿಷ್ಯದ ಬಗ್ಗೆ ಸೂಕ್ತ ಕಾರಣವನ್ನು ನೀಡಿದ್ದಾರೆ.
“ಯಾವುದೇ ಆಟಗಾರ ನಾಯಕನಾಗಲು ಬೇಕಾದ ಎಲ್ಲಾ ಗುಣಗಳನ್ನು ರಾಹುಲ್ ಹೊಂದಿದ್ದಾರೆ. ಅವರು ಎಲ್ಲಾ ಮೂರು ಮಾದರಿಯಲ್ಲೂ ಉತ್ತಮವಾಗಿ ಆಡುತ್ತಾರೆ. ಅಷ್ಟೇ ಅಲ್ಲದೆ ಯಾವುದೇ ಕ್ರಮಾಂಕದಲ್ಲಿ ಬೇಕಾದರೂ ಬ್ಯಾಟಿಂಗ್ ಮಾಡುತ್ತಾರೆ. ರಾಹುಲ್ ತಮ್ಮ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿ ತಂಡದ ಬಗ್ಗೆ ಯೋಚಿಸುತ್ತಾರೆ. ವಿರಾಟ್ ರಂತೆಯೇ ಅವರು ತುಂಬಾ ಶ್ರದ್ಧೆಯಿಂದ ಆಡುತ್ತಾರೆ ಎಂದು ಕನ್ನಡಿಗನ ಗುಣಗಾನ ಮಾಡಿದ್ದಾರೆ ಶ್ರೀಶಾಂತ್.
‘ವಿರಾಟ್ ಕೊಹ್ಲಿ ಕ್ರಿಕೆಟ್ ರಾಜನಾಗಿದ್ದರೆ, ಸಚಿನ್ ಕ್ರಿಕೆಟ್ ದೇವರು’
ಇದೇ ವೇಳೆ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ ಶ್ರೀಶಾಂತ್, ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರ ವರ್ತನೆ ಉತ್ತಮವಾಗಿದೆ. ಆದಾಗ್ಯೂ ವಿರಾಟ್ ಅವರನ್ನು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಹೋಲಿಸಲು ಸಾಧ್ಯವಿಲ್ಲ. ಏಕೆಂದರೆ ಇಬ್ಬರೂ ತಮ್ಮದೇ ಆದ ಆಟದ ಶೈಲಿಯನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ ಕ್ರಿಕೆಟ್ ರಾಜನಾಗಿದ್ದರೆ, ಸಚಿನ್ ಕ್ರಿಕೆಟ್ ದೇವರು ಎಂದು ಹೇಳಿದರು.








