ಕಿಚ್ಚನ “ಕೋಟಿಗೊಬ್ಬ 3” ಸಿನಿಮಾಗೆ ಪೈರೆಸಿ ಕಾಟ..!
ಸಾಕಷ್ಟು ಅಡಚಣೆ ನಡುವೆ , ತಂತೆ ತಕಾರಾರುಗಳ ನಂತರ ಸಿನಿಮಾ ಮಂದಿರಗಳಲ್ಲಿ ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 3 ರಿಲೀಸ್ ಆದ್ರೂ ಕೂಡ ಮೊದಲ ದಿನವೇ ಫಸ್ಟ್ ಶೋ ಕ್ಯಾನ್ಸಲ್ ಆಗಿತ್ತು. ಈ ಮೂಲಕ ಫಸ್ಟ್ ಶೋನಲ್ಲಿ ಸಿನಿಮಾ ಕಣ್ತುಂಬಿಕೊಳ್ಳುವ ಕಾತರದಿಂದ ಥಿಯೇಟರ್ ಗಳ ಮುಂದೆ ಕಾಯ್ತಿದ್ದ ಅಭಿಮಾನಿಗಳಿಗೆ ದೊಡ್ಡ ನಿರಾಸೆಯುಂಟಾಗಿತ್ತು. ಅಭಿಮಾನಿಗಳು ಪ್ರತಿಭಟನೆ ಮಾಡಿ ಆಕ್ರೋಶ ಹೊರ ಹಾಕಿದ್ರು.
ಇಷ್ಟೆಲ್ಲಾ ಕಷ್ಟಗಳನ್ನ ಎದುರಿಸಿ ಸಿನಿಮಾ ಇನ್ನೇನು ರಿಲೀಸ್ ಆಯ್ತು ಅನ್ನೋ ಹೊತ್ತಲ್ಲೇ ಇದೀಗ ಸಿನಿಮಾಗೆ ಪೈರೆಸಿ ಕಾಟ ಶುರುವಾಗಿದೆ. ಟೆಲಿಗ್ರಾಮ್ ನಲ್ಲಿ ಸಿನಿಮಾದ ಲಿಂಕ್ ಲೀಕ್ ಆಗಿದ್ದು, ಸ್ಟಾರ್ ನಟ ಕಿಚ್ಚನ ಸಿನಿಮಾಗೆ ದೊಡ್ಡ ತೊಡಕು ಎದುರಾಗಿದೆ. ಕೇವಲ ಕೋಟಿಗೊಬ್ಬ ಅಷ್ಟೇ ಅಲ್ಲ ದುನಿಯಾ ವಿಜಿ ಅಭಿನಯದ ಸಲಗಕ್ಕೂ ಪೈರೆಸಿ ಭೂತ ಕಾಡುತ್ತಿದೆ.
ಇದೀಗ ಸಿಐಡಿ ಸೈಬರ್ ಘಟಕದ ಪೊಲೀಸರು ದುಬೈನಲ್ಲಿರುವ ಟೆಲಿಗ್ರಾಮ್ ಆಪ್ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಸಲಗ ಕೋಟಿಗೊಬ್ಬ 2 ಎರಡೂ ಸಿನಿಮಾಗಳನ್ನು ಕೂಡ ಕನ್ನಡ ರಾಕರ್ಸ್ ಟೆಲಿಗ್ರಾಮ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಎರಡು ಸಿನಿಮಾಗಳಿಗೂ ಪೈರಸಿ ಭೂತ ದೊಡ್ಡ ಪೆಟ್ಟು ನೀಡಿದೆ.
ಪೈರಸಿ ಸಂದೇಶಕ್ಕೆ ಹೆದರಿದ್ದ ಕೋಟಿಗೊಬ್ಬ – 3 ನಿರ್ಮಾಪಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ನೀಡಿದ್ದರು. ಪೈರಸಿ ಸಂದೇಶ ಹರಿದಾಡುತ್ತಿದ್ದು, ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಕೋರಿದ್ದರು. ಈ ಕುರಿತ ದೂರನ್ನು ತನಿಖೆ ನಡೆಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ದೂರನ್ನು ಸಿಸಿಬಿ ಪೊಲೀಸರಿಗೆ ವರ್ಗಾಯಿಸಿದ್ದರು. ಇದರ ಜತೆಗೆ ಸಿಐಡಿ ಸೈಬರ್ ಘಟಕಕ್ಕೂ ದೂರು ನೀಡಲಾಗಿತ್ತು. ಇದು ದೊಡ್ಡ ಮಟ್ಟದ ಸುದ್ದಿಯಾಗಿತ್ತು.
ಇಷ್ಟೆಲ್ಲಾ ಮುನ್ನೆಚ್ಚರಿಕೆ ಕ್ರಮದ ನಡುವೆಯೂ ಕನ್ನಡ ರಾಕರ್ಸ್ ಹೆಸರಿನ ಟೆಲಿಗ್ರಾಮ್ ಚಾನೆಲ್ ನಲ್ಲಿ ಎರಡು ಸ್ಟಾರ್ ನಟರ ಸಿನಿಮಾಗಳು ಲೀಕ್ ಆಗಿದೆ. ಅಷ್ಟೇ ಅಲ್ಲದೇ ಸಿನಿಮಾ ಲಿಂಕ್ ಮೂಲಕ ಲಕ್ಷಾಂತರ ಮಂದಿ ಸಿನಿಮಾಗಳನ್ನ ಡೌನ್ ಲೋಡ್ ಮಾಡಿ ವೀಕ್ಷಣೆ ಮಾಡಿದ್ದಾರೆ.
ಕೋಟಿಗೊಬ್ಬ -3 ಸಿನಿಮಾ ಪೈರಸಿ ದೂರು ಸಂಬಂಧ ಸಿಐಡಿ ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೋಟಿಗೊಬ್ಬ -3 ಸಿನಿಮಾ ಲಿಂಕ್ ಅಪ್‌ಲೋಡ್ ತಾಂತ್ರಿಕ ವಿವರಗಳನ್ನು ಒದಗಿಸುವ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸಿಐಡಿ ಸೈಬರ್ ಘಟಕದ ಅಧಿಕಾರಿಗಳು ದುಬೈನಲ್ಲಿರುವ ಟೆಲಿಗ್ರಾಮ್ ಆಡಳಿತ ಕಚೇರಿಯ ಮುಖ್ಯಸ್ಥರಿಗೆ ನೋಟಿಸ್ ನೀಡಿದ್ದಾರೆ.