ನಿತ್ಯೋತ್ಸವ ಕವಿ, ಹಿರಿಯ ಸಾಹಿತಿ ನಿಸಾರ್ ಅಹಮದ್ (84) ಅವರು ಇಂದು ಬೆಂಗಳೂರಿನ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ನಿಧನರಾದರು. ಅವರ ನಿಧನಕ್ಕೆ ರಾಜ್ಯ ಬಿಜೆಪಿ ನಾಯಕರು ಕಂಬನಿ ಮಿಡಿದಿದ್ದಾರೆ.
ನಿಸಾರ್ ಅಹಮದ್ ಅವರ ನಿಧನಕ್ಕೆ ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ‘ಹಿರಿಯ ಸಾಹಿತಿ ಕೆ ಎಸ್ ನಿಸಾರ್ ಅಹಮದ್ ಅವರ ನಿಧನ ದುಃಖ ತಂದಿದೆ. ಅವರು ಪ್ರಾಧ್ಯಾಪಕರಾಗಿ, ಭೂ ವಿಜ್ಞಾನಿಯಾಗಿಯೂ ಸೇವೆ ಸಲ್ಲಿಸಿದ್ದರು. ಸಂವೇದನಾಶೀಲ ಲೇಖಕರಾಗಿ, ಜನಪ್ರಿಯ ಕವಿಯಾಗಿ ಅವರು ಗುರುತಿಸಿಕೊಂಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು, ಅವರ ಕುಟುಂಬ ಸದಸ್ಯರು, ಅಭಿಮಾನಿಗಳಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ತಿಳಿಸಿದ್ದಾರೆ.
ಇನ್ನು ನಿಸಾರ್ ಅಹಮದ್ ನಿಧನದಿಂದ ತೀವ್ರ ಆಘಾತವಾಗಿದೆ ಎಂದಿರುವ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ, ‘ನಿತ್ಯೋತ್ಸವದ ಕವಿ, ಕನ್ನಡ ಕಾವ್ಯ ಜಗತ್ತಿಗೆ ನವೋಲ್ಲಾಸ ತಂದುಕೊಟ್ಟ ಉತ್ಸಾಹದ ಚಿಲುಮೆ ಪ್ರೊ. ಕೆ ಎಸ್ ನಿಸಾರ್ ಅಹಮದ್ ನಿಧನದಿಂದ ನನಗೆ ತೀವ್ರ ಆಘಾತವಾಗಿದೆ. ಅವರ ಕುಟುಂಬಕ್ಕೆ, ಸಾರಸ್ವತ ಲೋಕಕ್ಕೆ ಇವರ ಅಗಲಿಕೆಯನ್ನು ಭರಿಸುವ ಶಕ್ತಿ ದೊರೆಯಲಿ. ಪ್ರೊ. ನಿಸಾರರಿಗೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ‘ ಎಂದು ಟ್ವೀಟ್ ಮಾಡಿದ್ದಾರೆ.
ನಿಸಾರ್ ಅಹಮದ್ ಅವರ ನಿಧನದ ಸುದ್ದಿ ನನಗೆ ಅತ್ಯಂತ ದುಃಖ ತಂದಿದೆ ಎಂದಿರುವ ಸಚಿವ ಸಿ ಟಿ ರವಿ, ‘ಮನಸು ಗಾಂಧಿಬಜಾರು ಕವನ ಸಂಕಲನ, ಬೆಣ್ಣೆ ಕದ್ದ ನಮ್ಮ ಕೃಷ್ಣದಂತಹ ಕವನ ನಮಗೆ ಕೊಟ್ಟು, ಜೋಗದ ಸಿರಿ ಬೆಳಕಿನ ಮೂಲಕ ನಿತ್ಯೋತ್ಸವವನ್ನು ವರ್ಣಿಸಿದ ಶ್ರೇಷ್ಠ ಕವಿ ಕೆ.ಎಸ್ ನಿಸಾರ್ ಅಹಮದ್ ಅವರ ನಿಧನದ ಸುದ್ದಿ ನನಗೆ ಅತ್ಯಂತ ದುಃಖ ತಂದಿದೆ. ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ,ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ’ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.








