ಅ. 27ರಂದು ಆಮರಣಾಂತ ಉಪವಾಸಕ್ಕೆ ಸಜ್ಜಾದ ಅತಿಥಿ ಉಪನ್ಯಾಸಕರು Guest lecturers Saaksha tv
ಮೈಸೂರು: ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಕ್ಟೋಬರ್ 27ರಿಂದ (ನಾಳೆ) ಆಮರಣಾಂತ ಉಪವಾಸ ನಡೆಸಲು ಸಿದ್ಧತೆ ನಡೆಸಿದ್ದಾರೆ.
ಎರಡು ದಿನಗಳ ಹಿಂದೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರನ್ನು ಭೇಟಿಯಾಗಿ ವೇತನ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದರು. ಈ ವೇಳೆ ಅವರು, ಕೊರೋನಾದ ಸಂಕಷ್ಟದ ಸಮಯದಲ್ಲಿ ನಾವು ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದ್ದೇವೆ. ಆದರೂ 8 ತಿಂಗಳಿಂದ ನಮಗೆ ವೇತನ ಪಾವತಿಯಾಗಿಲ್ಲ. ದಯವಿಟ್ಟು ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದ್ದರು. ಮನವಿಯನ್ನು ಆಲಿಸಿದ ಅಶ್ವತ್ಥ್ ನಾರಾಯಣ್, ಕಲಾವಿದರಿಗೆ ಅನ್ಯಾಯ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದರು.
ಆದರೆ, ವೇತನ ಪಾವತಿ ವಿಷಯದಲ್ಲಿ ಯಾವುದೇ ಸುಧಾರಣೆ ಕಂಡುಬರದ ಹಿನ್ನೆಲೆಯಲ್ಲಿ ಇಂದು ಮತ್ತೊಮ್ಮೆ ಕುಲಪತಿ ಡಾ. ನಾಗೇಶ್ ಬೆಟ್ಟಕೋಟೆಯವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ತೆರಳಿದ್ದಾರೆ. ಆದರೆ, ಸಕಾರಾತ್ಮಕ ಭಾವನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ನಾಳೆಯಿಂದ ಅನಿರ್ದಿಷ್ಟಾವಧಿ ಶಾಂತಿಯುತ ಆಮರಣಾಂತ ಉಪವಾಸ ನಡೆಸುವುದಾಗಿ ಕುಲಪತಿ ಮತ್ತು ಕುಲಸಚಿವರಿಗೆ ಪತ್ರ ಮುಖೇನ ಮಾಹಿತಿ ನೀಡಿದ್ದಾರೆ.
ಇನ್ನು ವೇತನ ನೀಡುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅನವಶ್ಯಕವಾಗಿ ಅಕ್ಟೋಬರ್ 30ರ ವರೆಗೆ ವಿಶ್ವವಿದ್ಯಾಲಯಕ್ಕೆ ರಜೆ ಘೋಷಿಸಲಾಗಿದೆ. ರಜೆಗೆ ಆಡಿಟ್ ನಡೆಯುತ್ತಿರುವ ಕಾರಣವನ್ನು ಕೊಡಲಾಗಿದೆ. ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಬೋಧಕೇತರ ಸಿಬ್ಬಂದಿಗೆ ಆಡಿಟ್ ನಡೆಯುತ್ತಿರುವ ಕಾರಣಕ್ಕೆ ರಜೆ ನೀಡುವ ಪದ್ಧತಿ ಇಲ್ಲ. ಆದರೆ, ವೇತನ ಸಮಸ್ಯೆಯನ್ನು ಪರಿಹರಿಸಲಾಗದೆ ಅಥವಾ ಪರಿಹರಿಸುವ ಮನಸಿಲ್ಲದ ಕಾರಣದಿಂದ ಈ ರೀತಿ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ.
ಇವೆಲ್ಲ ಬೆಳವಣಿಗೆಗಳ ನಡುವೆ, ನಾಳೆ ನಡೆಸಲು ಉದ್ದೇಶಿಸಿರುವ ಶಾಂತಿಯುತ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಅನುಮತಿ ಮತ್ತು ಸೂಕ್ತ ರಕ್ಷಣೆ ನೀಡುವಂತೆ ಲಕ್ಷ್ಮೀಪುರಂ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮನವಿ ಮಾಡಿದೆ. ಮನವಿಯಲ್ಲಿ 8 ತಿಂಗಳಿಂದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವೇತನ ಪಾವತಿಸಿಲ್ಲ. ಆದ್ದರಿಂದ ಶಾಂತಿಯುತವಾಗಿ ಪ್ರತಿಭಟನೆಗೆ ರಕ್ಷಣೆ ಮತ್ತು ಅನುಮತಿ ಕೋರಲಾಗಿದೆ. ಜೊತೆಗೆ, 13 ವರ್ಷಗಳಿಂದ ವಿಶ್ವವಿದ್ಯಾಲಯದಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿಯಾಗಿ ನಿರಂತರವಾಗಿ ವಿಶ್ವವಿದ್ಯಾಲಯದಲ್ಲಿ ಕಡಿಮೆ ವೇತನಕ್ಕೆ ಕಾರ್ಯ ನಿರ್ವಹಿಸುತ್ತಿದ್ದು, ಕೊರೊನಾ ಸಂಕಷ್ಟದ ಸಮಯದಲ್ಲಿ ಜೀವನ ನಿರ್ವಹಣೆ ಕಷ್ಟಕರವಾಗಿದೆ. ವಿಶ್ವವಿದ್ಯಾಲಯದಲ್ಲಿ ಹಣವಿದ್ದರೂ ವೇತನ ಪಾವತಿಸದೆ ಇರುವ ಕಾರಣಕ್ಕೆ ನಮಗೆ ತೊಂದರೆಯಾಗಿದೆ ಎಂದು ಹೇಳಲಾಗಿದೆ.
ಅಲ್ಲದೆ ಕುಟುಂಬದ ನಿರ್ವಹಣೆ ನಮ್ಮ ಹೊಣೆಯಾಗಿದ್ದರೂ ಇಷ್ಟು ದಿನಗಳ ಕಾಲ ವೇತನವಿಲ್ಲದೆ ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕೆಲಸ ಕಾರ್ಯಗಳಿಗೆ ಕುಂದುಂಟುಗಾದಂತೆ ಕೆಲಸ ನಿರ್ವಹಿಸಿರುತ್ತೇವೆ. ಆದರೆ ಇದುವರೆಗೆ ಕೆಲಸ ಮಾಡಿ, ಒಡವೆ ಅಡವಿಟ್ಟು ಜೀವನ ನಡೆಸಿರುವುದೇ ದೊಡ್ಡಸಂಗತಿ. ಇನ್ನುಮುಂದೆ ಜೀವನ ನಿರ್ವಹಣೆ ಕಷ್ಟಸಾಧ್ಯ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ಇನ್ನು ಕುಲಪತಿಗಳು, ಕುಲಸಚಿವರು 25.10.2021ರಂದು 2 ಪ್ರತ್ಯೇಕ ಆದೇಶ ಹೊರಡಿಸಿ ಬೋಧಕ ಬೋಧಕೇತರ ವರ್ಗದವರ ಕೆಲಸಕ್ಕೆ ನಿರ್ಬಂಧ ಹೇರಿರುವುದು ನಮ್ಮ ಉದ್ಯೋಗ ಅಭದ್ರತೆಗೆ ಕಾರಣವಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ನ್ಯಾಯಕ್ಕಾಗಿ ಶಾಂತಿಯುತ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಅನುಮತಿ ಮತ್ತು ಸೂಕ್ತ ಭದ್ರತೆ ಒದಗಿಸಬೇಕು ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ. 15ಕ್ಕೂ ಹೆಚ್ಚು ಸಿಬ್ಬಂದಿ ಈ ಪತ್ರಕ್ಕೆ ಸಹಿ ಹಾಕಿದ್ದಾರೆ.









