ನವದೆಹಲಿ : ಲಾಕ್ ಡೌನ್ ಹಿನ್ನೆಲೆ ವಲಸೆ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಹಣವಿಲ್ಲದೇ ಒಂದು ಹೊತ್ತಿನ ಊಟಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಹಸಿವಿನಿಂದ ಸಾಯುತ್ತಿರುವ ವಲಸೆ ಕಾರ್ಮಿಕರಿಂದ ಹಣ ಕೇಳುವ ಕೇಂದ್ರ ಸರ್ಕಾರ ಎಂಥಾ ದುರಾವಸ್ತೆಯಲ್ಲಿದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ಲಾಕ್ ಡೌನ್ ನಿಂದಾಗಿ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳಲು ಸಾಧ್ಯವಾಗಿಲ್ಲ. ಹೀಗಾಗಿ ಅವರನ್ನು ಅವರವರ ರಾಜ್ಯಗಳಿಗೆ ತಲುಪಿಸಲು ಕೇಂದ್ರ ಸರ್ಕಾರ ವಿಶೇಷ ರೈಲುಗಳ ವ್ಯವಸ್ಥೆ ಮಾಡಿ ಹಣ ಪಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ವಿರುದ್ಧ ಕಿಡಿಕಾರಿರುವ ಸುಬ್ರಮಣಿಯನ್, ವಿದೇಶದಲ್ಲಿ ಸಿಲುಕಿದ್ದವರನ್ನು ಉಚಿತವಾಗಿ ಕರೆತರಲಾಗುತ್ತಿದೆ. ಆದರೆ, ವಲಸೆ ಕಾರ್ಮಿಕರಿಂದ ಹಣ ಕೇಳಲಾಗುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಜನರನ್ನು ಮನೆಗೆ ಸುರಕ್ಷಿತವಾಗಿ ತಲುಪಿಸಬೇಕಿರುವುದು ಸರ್ಕಾರದ ಕರ್ತವ್ಯ. ರೈಲ್ವೆ ಇಲಾಖೆ ಹಣ ಕೊಡದಿದ್ದರೆ ಪಿಎಂ ಕೇರ್ಸ್ ಫಂಡ್ ನಿಂದ ನೀಡಿ. ಕೇಂದ್ರ ಸರ್ಕಾರ 85% ಮತ್ತು ರಾಜ್ಯ ಸರ್ಕಾರ 15% ಹಣ ಪಾವತಿಸಿ’ ಎಂದು ಸುಬ್ರಮಣಿಯನ್ ಸ್ವಾಮಿ ಕೇಂದ್ರಕ್ಕೆ ಸಲಹೆ ನೀಡಿದ್ದಾರೆ.








