ಕಾಣದಂತೆ ಮಾಯವಾದನು… ಮಣ್ಣಲ್ಲಿ ಮಣ್ಣಾದ ರಾಜರತ್ನ Puneeth Rajkumar saaksha tv
ಬೆಂಗಳೂರು : ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಟ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ ನಡೆದಿದೆ. ರಾಜ್ ಕುಟುಂಬಸ್ಥರು, ಚಿತ್ರರಂಗದ ಹಿರಿಯರು, ರಾಜ್ಯ ಗಣ್ಯರು ಭಾಗಿಯಾಗಿ, ಅಂತಿಮ ನಮನ ಸಲ್ಲಿಸಿದ್ದಾರೆ. ಈಡಿಗ ಸಂಪ್ರದಾಯಂತೆ ಅಂತಿಮ ವಿಧಿವಿಧಾನವನ್ನು ನೆರವೇರಿಸಲಾಗಿದೆ.
ನಟ ಪುನೀತ್ ಅಕ್ಟೋಬರ್ 29ರಂದು ಹೃದಯಾಘಾತದಿಂದ ಅಕಾಲಿಕವಾಗಿ ಇಹಲೋಕ ತ್ಯಜಿಸಿದರು. ಪುನೀತ್ ಸಾವು ನಾಡಿಗೆ ಆಘಾತವನ್ನುಂಟು ಮಾಡಿತ್ತು. ಬೆಂಗಳೂರಿನ ಕಂಠೀರವ ಸ್ಟೇಡಿಯಂನತ್ತ ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು. ಲಕ್ಷಾಂತರ ಅಭಿಮಾನಿಗಳು ಕಂಠೀರವ ಸ್ಟೇಡಿಯಂಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
ಇಂದು ಮುಂಜಾನೆ 4ಕ್ಕೆ ಸಾರ್ವಜನಿಕರಿಗೆ ದರ್ಶನವನ್ನು ಅಂತ್ಯಗೊಳಿಸಲಾಯಿತು. ಅಲ್ಲಿಂದ ಮೆರವಣಿಗೆಯಲ್ಲಿ ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೋಗೆ ಕರೆತರಲಾಯಿತು. ಅಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳು ನೆರವೇರಿದವು. ಡಾ.ರಾಜ್ ಸಮಾಧಿಯಿಂದ 125 ಅಡಿ ಅಂತರದಲ್ಲಿ ಹಾಗೂ ಪಾರ್ವತಮ್ಮ ಸಮಾಧಿಯಿಂದ 45 ಅಡಿ ಅಂತರದಲ್ಲಿ ಪುನೀತ್ ಅಂತ್ಯಕ್ರಿಯೆ ನೆರವೇರಿದೆ.
ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಡಾ.ಅಶ್ವತ್ಥ್, ಆರ್.ಅಶೋಕ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕರು ಭಾಗಿಯಾಗಿದ್ದರು. ಚಂದನವನದ ರವಿಚಂದ್ರನ್, ಸುದೀಪ್, ಯಶ್, ಜಗ್ಗೇಶ್, ದುನಿಯಾ ವಿಜಯ್, ಉಪೇಂದ್ರ, ಗಣೇಶ್, ಸಾಧು ಕೋಕಿಲ, ಸೇರಿ ಹಲವರು ಭಾಗಿಯಾಗಿ ಪುನೀತ್ ಗೆ ಅಂತಿಮ ನಮನ ಸಲ್ಲಿಸಿದ್ದಾರೆ.









