ಡೆತ್ ನೋಟ್ ನಲ್ಲಿ ಇಬ್ಬರು ಪೊಲೀಸರ ಹೆಸರು ಬರೆದಿಟ್ಟು ಮಹಿಳಾ ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆ
ಡೆತ್ ನೋಟ್ ನಲ್ಲಿ ಇಬ್ಬರು ಪೊಲೀಸರ ಹೆಸರು ಬರೆದಿರುವ ಮ್ಯಾನೇಜರ್
ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಬ್ಯಾಂಕ್ ಉದ್ಯೋಗಿ ಶ್ರದ್ಧಾ – ಅಯೋಧ್ಯೆಯಲ್ಲಿ ಘಟನೆ
ಪ್ರಕರಣದ ಉನ್ನತ ತನಿಖೆಗೆ ಅಖಿಲೇಶ್ ಯಾದವ್ ಆಗ್ರಹ
ಅಯೋಧ್ಯ : ಬ್ಯಾಂಕ್ ಉದ್ಯೋಗಿಯೊಬ್ಬರು ಡೆತ್ ನೋಟ್ ನಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಯೋಧ್ಯೆಯಲ್ಲಿ ನಡೆದಿದೆ. ಫೈಜಾಬಾದ್ ನ ಸಹಂಗಂಜ್ ನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯ 32 ವರ್ಷದ ಡೆಪ್ಯೂಟಿ ಮ್ಯಾನೇಜರ್ ಶ್ರದ್ಧಾ ಗುಪ್ತಾ ನೇಣಿಗೆ ಶರಣಾಗಿದ್ದಾರೆ. ಅವರ ಬಾಡಿಗೆ ಮನೆಯಲ್ಲಿ ಮೃತದೇಹದ ಜೊತೆಗೆ ಡೆತ್ ನೋಟ್ ಪತ್ತೆಯಾಗಿದೆ. ಇಬ್ಬರು ಪೊಲೀಸರ ಹೆಸರುಗಳನ್ನ ಬರೆದಿಟ್ಟು ಸಾವನಪ್ಪಿದ್ದಾರೆ.
ಈ ಬಗ್ಗೆ ಮಾತನಾಡಿರೋ ಅಯೋಧ್ಯೆಯ ಹಿರಿಯ ಪೊಲೀಸ್ ಅಧೀಕ್ಷಕ ಶೈಲೇಶ್ ಪಾಂಡೆ ಅವರು ಈ ವಿಷಯ ತನಿಖೆಯಲ್ಲಿದೆ ಎಂದಿದ್ಧಾರೆ. ಪೊಲೀಸರ ಪ್ರಕಾರ, ಶ್ರದ್ಧಾ ಗುಪ್ತಾ ಅವರು 2015 ರಲ್ಲಿ ಕ್ಲರ್ಕ್ ಆಗಿ ಬ್ಯಾಂಕಿಗೆ ಸೇರಿದ್ದರು. ಮತ್ತು ಅವರು ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಬಡ್ತಿ ಪಡೆದಿದ್ದರು. ಅವರನ್ನು 2018 ರಿಂದ ಫೈಜಾಬಾದ್‌ನಲ್ಲಿ ನಿಯೋಜಿಸಲಾಗಿದೆ.
ಅವಿವಾಹಿತರಾಗಿರುವ ಗುಪ್ತಾ ಅವರು ಲಕ್ನೋದ ರಾಜಾಜಿಪುರಂ ಪ್ರದೇಶದವರಾಗಿದ್ದು, ಕೆಲವೊಮ್ಮೆ ಅವರ ಕುಟುಂಬವನ್ನು ಭೇಟಿಯಾಗುತ್ತಿದ್ದರು ಎಂದು ಅವರು ಹೇಳಿದರು. ಇಂದು ಬೆಳಿಗ್ಗೆ ಅವರ ಮನೆಗೆ ಹಾಲಿನವರು ಹಾಲು ಹಾಕಲು ಬಂದಿದ್ದಾರೆ. ಆದ್ರೆ ಎಷ್ಟೇ ಕೂಗಿದ್ರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆಗ ಈ ಬಗ್ಗೆ ಮನೆ ಮಾಲೀಕರಿಗೆ ತಿಳಿಸಲಾಗಿದೆ.
ಆಕೆ ಬಾಗಿಲು ತೆರೆಯದಿದ್ದಾಗ ಪಕ್ಕದ ಕಿಟಕಿಯಿಂದ ಇಣುಕಿ ನೋಡಿದಾಗ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ ಎಂದು ಹೇಳಲಾಗಿದೆ. ತಕ್ಷಣವೇ ಪೊಲೀಸರಿಗೆ ಈ ಬಗ್ಗೆ ತಿಳಿಸಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ಅವರು ಪೊಲೀಸ್ ಅಧಿಕಾರಿ, ಕಾನ್‌ಸ್ಟೆಬಲ್ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ದೂಷಿಸಿದ್ದಾರೆ ಎಂದು ಹೇಳಿದ್ದಾರೆ. ಆದ್ರೆ, ಅವರು ಏನು ಆರೋಪಿಸಿದ್ದಾರೆ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ. ಇನ್ನೂ ಈ ಘಟನೆ ಸಂಬಂಧ ಟ್ವೀಟ್ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಅಲ್ಲದೇ ಅಯೋಧ್ಯೆಯ ಮಹಿಳಾ ಪಿಎನ್‌ಬಿ ಉದ್ಯೋಗಿಯೊಬ್ಬರು ತಮ್ಮ ಆತ್ಮಹತ್ಯೆ ಪತ್ರದಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ ನೇರ ಆರೋಪ ಮಾಡಿರುವ ರೀತಿ ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಕಹಿ ಸತ್ಯ. ಐಪಿಎಸ್ ಅಧಿಕಾರಿಯ ಹೆಸರೂ ಕೇಳಿಬರುತ್ತಿರುವುದು ಅತ್ಯಂತ ಗಂಭೀರ ವಿಷಯವಾಗಿದೆ. ಇದು ಉನ್ನತ ಮಟ್ಟದ ನ್ಯಾಯಾಂಗ ತನಿಖೆಯಾಗಬೇಕು ಎಮದು ಒತ್ತಾಯಿಸಿದ್ದಾರೆ.