ಸಮಗ್ರ ಕರ್ನಾಟಕ ನಿರ್ಮಾಣಕ್ಕೆ ಕ್ರಮ : ಬೊಮ್ಮಾಯಿ
ಬೆಂಗಳೂರು : ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದೂ, ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಘೋಷಿಸುವ ಮೂಲಕ ಕನ್ನಡ, ಕನ್ನಡಿಗರು ಸೇರಿದ ಸಮಗ್ರ ಕರ್ನಾಟಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಅನುದಾನವನ್ನು ದುಪ್ಪಟ್ಟುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
66ನೇ ಕನ್ನಡ ರಾಜ್ಯೋತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾಯಿ ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ನಂತರ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ, ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದೂ, ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಘೋಷಿಸುವ ಮೂಲಕ ಕನ್ನಡ, ಕನ್ನಡಿಗರು ಸೇರಿದ ಸಮಗ್ರ ಕರ್ನಾಟಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಅನುದಾನವನ್ನು ದುಪ್ಪಟ್ಟುಗೊಳಿಸಲಾಗುವುದು.
ಕರ್ನಾಟಕದ ಗಡಿ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಆದರೆ ಕೆಲವು ಶಕ್ತಿಗಳು ಗೊಂದಲ ಮೂಡಿಸುವ ಕೆಲಸ ಮಾಡುತ್ತಿವೆ. ಈ ಶಕ್ತಿಗಳನ್ನು ಸೋಲಿಸಲು ಸರ್ಕಾರ ಹೋರಾಟ ಮಾಡುವ ಮೂಲಕ ಕನ್ನಡವನ್ನೇ ಶಕ್ತಿಯಾಗಿ ಬೆಳೆಸಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ರಾಜ್ಯದ ಯುವಜನರು ಜಾಗತೀಕರಣ, ಖಾಸಗೀಕರಣ, ಉದಾಕರೀಕಣರದೊಂದಿಗಿನ ಸ್ಪರ್ಧೆ ಮೂಲಕ ಉದ್ಯೋಗ ಮತ್ತು ಅವಕಾಶಗಳನ್ನು ಗಳಿಸಲು ಶಿಕ್ಷಣದಲ್ಲಿ ತಾಂತ್ರಿಕ ತರಬೇತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
180 ಐ ಟಿ ಐಗಳನ್ನು ಉನ್ನತೀಕರಿಸುತ್ತಿದ್ದು, ಶೀಘ್ರವೇ ಆರಂಭಿಸಲಾಗುವುದು. ಶಿಕ್ಷಣ ಕ್ಷೇತ್ರದಲ್ಲೇ ಎಸ್ಸೆಸ್ಸೆಲ್ಸಿ ಹಾಗೂ 8ನೇ ತರಗತಿಯ ಬಳಿಕ ತಾಂತ್ರಿಕ ಶಿಕ್ಷಣ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ, ಭಾಷಾ ಬೋಧನೆಗೆ ಹೆಚ್ಚಿನ ಆದ್ಯತೆ ನೀಡಿದೆ. ತಮ್ಮ ಸರ್ಕಾರ ಮೊದಲ ಬಾರಿಗೆ ತಾಂತ್ರಿಕ ಶಿಕ್ಷಣವನ್ನು ಕನ್ನಡದಲ್ಲಿ ಬೋಧಿಸಲು ಕ್ರಮ ಕೈಗೊಂಡಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಶಾಸಕ ರಿಜ್ವಾನ್ ಹರ್ಷದ್, ಪರಿಷತ್ ಸದಸ್ಯ ಅ. ದೇವೇಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.









