ತೈಲ ದರ ಇಳಿಕೆ ದೀಪಾವಳಿ ಗಿಫ್ಟ್ ಅಲ್ಲ.. ಬೈ ಎಲೆಕ್ಷನ್ ಸೋಲಿನ ಎಫೆಕ್ಟ್
ಬೆಂಗಳೂರು : ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿದ್ದು, ಪ್ರಧಾನಿ ನೀಡಿದ ದೀಪಾವಳಿ ಕೊಡುಗೆ ಅಲ್ಲ, ಇದು ದೇಶದಾದ್ಯಂತ ನಡೆದ ಉಪಚುನಾವಣೆಗಳ ಕೊಡುಗೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕುಟುಕಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಅವರು, ಯುಪಿಎ ಕಾಲದಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್‍ಗೆ 125 ಡಾಲರ್ ಇದ್ದಾಗ ಪೆಟ್ರೋಲ್ ಬೆಲೆ 65 ರೂಪಾಯಿಗಳಾಗಿತ್ತು. ಬಿಜೆಪಿ ಸರ್ಕಾರದಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್‍ಗೆ 82 ಡಾಲರ್ ಇದ್ದಾಗ ಪೆಟ್ರೋಲ್ ಬೆಲೆ 100 ರೂಪಾಯಿಗೆ ಇಳಿಸಿದ್ದು ಮಹಾನ್ ಸಾಧನೆ.
ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ಸೋಲಿಸಿದರೆ ಪೆಟ್ರೋಲ್ –ಡೀಸೆಲ್ ಬೆಲೆ ಇಳಿಯುತ್ತದೆ ಎನ್ನುವ ಪಾಠವನ್ನು ಹೇಳಿಕೊಟ್ಟ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಇದು ಪ್ರಧಾನಿ ನೀಡಿದ ದೀಪಾವಳಿ ಕೊಡುಗೆ ಅಲ್ಲ, ಇದು ದೇಶದಾದ್ಯಂತ ನಡೆದ ಉಪಚುನಾವಣೆಗಳ ಕೊಡುಗೆ.
ಅಡುಗೆ ಅನಿಲ ಬೆಲೆ ಸಾವಿರ ರೂಪಾಯಿ ತಲುಪಿದೆ, ಆಹಾರ ಧಾನ್ಯ, ಖಾದ್ಯತೈಲದ ಬೆಲೆ ಏರುತ್ತಲೇ ಇದೆ. ಈ ಬೆಲೆಗಳು ಕೂಡಾ ಇಳಿಯಬೇಕಾದರೆ ಬಿಜೆಪಿ ಅನ್ನು ಇನ್ನಷ್ಟು ಚುನಾವಣೆಗಳಲ್ಲಿ ಮತದಾರರು ಸೋಲಿಸುತ್ತಲೇ ಇರಬೇಕು.
ಸದ್ಯದಲ್ಲಿಯೇ ನಮ್ಮ ರಾಜ್ಯದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಗಳಿಗೆ ಹಾಗೂ ಬೆಂಗಳೂರು ಮಹಾನಗರಪಾಲಿಕೆಗೆ ಚುನಾವಣೆಗಳು ನಡೆಯಲಿವೆ. ನರೇಂದ್ರ ಮೋಧಿ ಅವರು ಹೇಳಿಕೊಟ್ಟಿರುವ ಪಾಠವನ್ನು ಮತದಾರರು ನೆನಪಲ್ಲಿಟ್ಟುಕೊಂಡು ಮತದಾನ ನಡೆಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ ಸಿದ್ದರಾಮಯ್ಯ.









