ರಜೆಗಾಗಿ ಸೈನಿಕರ ನಡುವೆ ಗುಂಡಿನ ಚಕಮಕಿ – ನಾಲ್ವರು ಯೋಧರ ಸಾವು
ದೀಪಾವಳಿ ರಜೆ ವಿಚಾರವಾಗಿ ನಡೆದ ಜಗಳದಲ್ಲಿ ನಾಲ್ವರು ಯೋಧರು ಪ್ರಾಣ ಕಳೆದುಕೊಂಡಿರುವ ಘಟನೆ ತೆಲಂಗಾಣ-ಛತ್ತೀಸ್‌ಗಢ ಗಡಿ ಭಾಗದಲ್ಲಿ ನಡೆದಿದೆ.
ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಅರೆಸೇನಾ ಪಡೆಯ ಶಿಬಿರದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಸೈನಿಕರ ನಡುವೆ ಜಗಳ ನಡೆದಿದ್ದೂ ಜಗಳ ತಾರಕಕ್ಕೇರಿ ಪರಸ್ಪರ ಗುಂಡಿನ ದಾಳಿ ಮಾಡಿಕೊಂಡಿದ್ದಾರೆ. ಈ ಘಟನೆಯಲ್ಲಿ ನಾಲ್ವರು ಸಿಬ್ಬಂದಿ ಸಾವನ್ನಪ್ಪಿ ಮೂವರು ಯೋಧರು ಗಾಯಗೊಂಡಿದ್ದಾರೆ.
ಸುಕ್ಮಾ ಜಿಲ್ಲೆಯ ಲಿಂಗಂಪಲ್ಲಿ ಗ್ರಾಮದ ಸಿಆರ್‌ಪಿಎಫ್‌ನ 50ನೇ ಬೆಟಾಲಿಯನ್‌ನ ಶಿಬಿರದಲ್ಲಿ ಮುಂಜಾನೆ 3:30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಸುಂದರರಾಜ್ ಪಿ ಅವರು ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.
ಬಿಹಾರದ ರಾಜಮಣಿ ಯಾದವ್, ದಾಂಜಿ ಮತ್ತು ಬಂಗಾಳದ ರಾಜುಮಂಡಲ್ ಎಂಬ ಸೈನಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಭದ್ರಾಚಲಂ ಏರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.








