ಆತ್ಮಹತ್ಯೆಗೆ ಶರಣಾಗಿದ್ದ ಅಪ್ಪು ಅಭಿಮಾನಿ ಮನೆಗೆ ರಾಘಣ್ಣ ಭೇಟಿ
ಬೆಂಗಳೂರು : ಇಂದಿಗೆ ಅಪ್ಪು ನಮ್ಮನ್ನೆಲ್ಲ ಅಗಲಿ 11 ದಿನಗಳು ಕಳೆದಿವೆ.. ಆದ್ರೂ ಅಪ್ಪು ಅಕಾಲಿಕ ನಿಧನದ ನೋವಿನಿಂದ ಅವರ ಕುಟುಂಬ ಹಾಗೂ ಕರುನಾಡು ಹೊರ ಬಂದಿಲ್ಲ. ಇಂದಿಗೂ ದೇವರ ಅನ್ಯಾಯ ನೆನಯುತ್ತಾ ವಿಧಿಗೆ ಶಾಪ ಹಾಕ್ತಾಯಿದ್ದಾರೆ ಅಭಿಮಾನಿಗಳು.. ಈ ದುಃಖ ತಡೆಯಲಾಗದೇ ಅನೇಕರು ಆತ್ಮಹತ್ಯೆಗೆ ಶರಣಾಗಿದ್ರೆ, ಹೃದಯಾಘಾತದಿಂದಲೂ ಅಪ್ಪು ಅಭಿಮಾನಿಗಳು ಉಸಿರು ನಿಲ್ಲಿಸಿದ್ದಾರೆ.
ರಾಘವೇಂದ್ರ ರಾಜ್‌ಕುಮಾರ್, ಶಿವರಾಜ್ ಕುಮಾರ್ ಅವರು ಈ ರೀತಿ ಮಾಡದಂತೆ ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ. ಇದೀಗ ಪುನೀತ್ ಅಗಲಿಕೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯೊಬ್ಬನ ನಿವಾಸಕ್ಕೆ ಇಂದು ರಾಘವೇಂದ್ರ ರಾಜ್‌ಕುಮಾರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ರು. ನವೆಂಬರ್ 04ರಂದು ರಾಮನಗರ ಜಿಲ್ಲೆ ಚನ್ನಪಟ್ಟಣದ ಎಲೆಕೆರೆಯಲ್ಲಿ ವೆಂಕಟೇಶ್ ಎಂಬ ಪುನೀತ್ ರಾಜ್‌ಕುಮಾರ್ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಪುನೀತ್ ಅಗಲಿಕೆಯಿಂದ ಖಿನ್ನತೆಗೆ ಜಾರಿದ್ದ ವೆಂಕಟೇಶ್ ಅನ್ನಾಹಾರ ಬಿಟ್ಟಿದ್ರು. ನಂತರ ಮನೆಗೆ ಬಂದು ನವೆಂಬರ್ 04ರಂದು ಆತ್ಮಹತ್ಯೆಗೆ ಶರಣಾಗಿದ್ದರು.
ಅಪ್ಪುಗೆ 650 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಶ್ರದ್ಧಾಂಜಲಿ
ವೆಂಕಟೇಶ್ ನಿವಾಸಕ್ಕೆ ಇಂದು ರಾಘವೇಂದ್ರ ರಾಜ್‌ಕುಮಾರ್ ಭೇಟಿ ನೀಡಿ ವೆಂಕಟೇಶ್ ಕುಟುಂಬಸ್ತರ ಜೊತೆಗೆ ಮಾತುಕತೆ ನಡೆಸಿದರು. ಮನೆಯವರೊಂದಿಗೆ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್ ಅವರು, ಒಂದು ಜೀವವನ್ನು ಕಳೆದುಕೊಂಡಾಗ ಎಷ್ಟು ದುಃಖವಾಗುತ್ತದೆ ಎಂಬುದು ನಮಗೆ ಗೊತ್ತಿದೆ. ನಾವೀಗ ಅದನ್ನು ಅನುಭವಿಸುತ್ತಿದ್ದೇವೆ. ನಮ್ಮ ದುಃಖ ನಿಮಗೆ ಬಂದಿರುವುದು ಬಹಳ ಬೇಸರದ ಸಂಗತಿ. ನಾವು ದುಃಖದಲ್ಲಿದ್ದಾಗ ಸಾಂತ್ವನ ಹೇಳಲು ಇಡೀ ರಾಜ್ಯ, ದೇಶವೇ ಬಂದಿದೆ. ಆದರೆ ನಿಮಗೆ ಸಾಂತ್ವನ ಹೇಳಲು ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ಇದೇ ವೇಳೆ ಯಾವ ಅಭಿಮಾನಿಗಳೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ಎಲ್ಲದಕ್ಕಿಂತಲೂ ಜೀವ ದೊಡ್ಡದು, ಕುಟುಂಬ ದೊಡ್ಡದು. ಪುನೀತ್ ಇಂದಾಗಿ ಅಭಿಮಾನಿಗಳು ಸಾವಿಗೀಡಾದರು ಎಂಬುದು ಬಹಳ ದುಃಖ ತರುವ ವಿಷಯ, ಪುನೀತ್‌ಗೆ ಆ ಹೆಸರು ಕೊಡಬೇಡಿ ಎಂದು ಮನವಿ ಮಾಡಿದರು. ಪುನೀತ್ ಸಾವಿನ ಬಳಿಕ ರಾಜ್ಯದಾದ್ಯಂತ ಈವರೆಗೆ 13ಕ್ಕೂ ಹೆಚ್ಚು ಮಂದಿ ಅಭಿಮಾನಿಗಳು ಸಾವಿಗೀಡಾಗಿದ್ದಾರೆ. ಇದರಲ್ಲಿ ಹಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲವರು ಹೃದಯಾಘಾತದಿಂದ ನಿಧನರಾಗಿದ್ದಾರೆ.