ಅರ್ಜುನ್ ಸರ್ಜಾ – ರಾಧಿಕಾ – ಜೆ ಡಿ ಚಕ್ರವರ್ತಿ ನಟೆನೆಯ “ಒಪ್ಪಂದ” ಚಿತ್ರದ ಹಾಡುಗಳು ಬಿಡುಗಡೆ
ಬಹುಭಾಷಾ ನಟ ಅರ್ಜುನ್ ಸರ್ಜಾ – ರಾಧಿಕಾ ಕುಮಾರಸ್ವಾಮಿ ಹಾಗೂ ಖ್ಯಾತ ನಟ ಜೆ ಡಿ ಚಕ್ರವರ್ತಿ ಪ್ರಮುಖಪಾತ್ರದಲ್ಲಿ ನಟಿಸಿರುವ “ಒಪ್ಪಂದ” ಚಿತ್ರದ ಹಾಡುಗಳು ಅದ್ಧೂರಿ ಕಾರ್ಯಕ್ರಮದ ಮೂಲಕ ರಿಲೀಸ್ ಆಗಿದೆ.
ಇದೇ ಸಂದರ್ಭದಲ್ಲಿ ಟ್ರೇಲರ್ ಸಹ ಅನಾವರಣವಾಯಿತು. ಆರು ಹಾಡುಗಳ ಪ್ರದರ್ಶನವಾಯಿತು.ನಿರ್ಮಾಪಕರಾದ ರೆಹಮಾನ್(ಯಜಮಾನ), ಕೆ.ಮಂಜು, ಸೆವೆನ್ ರಾಜ್, ಫ್ಯಾಷನ್ ಡಿಸೈನರ್ ರಾಜೇಶ್ ಶೆಟ್ಟಿ, ಭವ್ಯಗೌಡ, ಮೋಹಿನಿ ಚೌಧರಿ ಮುಂತಾದ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಹಾಡುಗಳನ್ನು ಬಿಡುಗಡೆ ಮಾಡಿ ಶುಭ ಕೋರಿದರು.
ಈ ಚಿತ್ರ ಉತ್ತಮವಾಗಿ ಮೂಡಿಬರಲು ಅರ್ಜುನ್ ಸರ್ಜಾ, ಜೆ ಡಿ ಚಕ್ರವರ್ತಿ ಹಾಗೂ ರಾಧಿಕಾ ಕುಮಾರಸ್ವಾಮಿ ಅವರ ಸಹಕಾರ ಬಹಳ ಮುಖ್ಯ. ಅವರೆಲ್ಲರೂ ಚಿತ್ರದಲ್ಲಿ ಅಮೋಘವಾಗಿ ನಟಿಸಿದ್ದಾರೆ. ನಾಲ್ಕು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಇದೇ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಸಮೀರ್.
ಚಿತ್ರದಲ್ಲಿ ಆರು ಹಾಡುಗಳಿವೆ. ನೀವೆಲ್ಲಾ ಈಗ ನೋಡಿದಿರಿ. ಹಾಡುಗಳು ಉತ್ತಮವಾಗಿ ಮೂಡಿ ಬರಲು ಸಹಕಾರಿಯಾದ ಗೀತರಚನೆಕಾರರಿಗೆ, ಗಾಯಕ, ಗಾಯಕಿಯರಿಗೆ ಹಾಗೂ ಚಿತ್ರದ ನಿರ್ದೇಶಕರಿಗೆ ಧನ್ಯವಾದ ತಿಳಿಸಿದರು ಸಂಗೀತ ನಿರ್ದೇಶಕ ಸುಭಾಷ್ ಆನಂದ್.
ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಅರ್ಜುನ್ ಸರ್ಜಾ, ಜೆ ಡಿ ಚಕ್ರವರ್ತಿ ಹಾಗೂ ರಾಧಿಕಾ ಕುಮಾರಸ್ವಾಮಿ ಅವರಂತಹ ನಟರೊಂದಿಗೆ ನಟಿಸಲು ಅವಕಾಶ ನೀಡಿದ ನಿರ್ದೇಶಕರಿಗೆ ನನ್ನ ಧನ್ಯವಾದ ಎಂದರು ನಟಿ ಸೋನಿ ಚರಿಶ್ಟಾ.
ಚಿತ್ರದ ಸಹ ನಿರ್ಮಾಪಕ ಶಶಿಧರ್ ಹಾಗೂ ಕಲಾವಿದ ದುಬೈ ರಫಿಕ್ ತಮ್ಮ ಅನುಭವ ಹಂಚಿಕೊಂಡರು. ಅರ್ಜುನ್ ಸರ್ಜಾ ಅವರು ವಿಡಿಯೋ ಮೂಲಕ ಚಿತ್ರತಂಡಕ್ಕೆ ಶುಭಕೋರಿದರು. ಸಮೀರ್ ಅವರೆ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರಕ್ಕೆ ಅಮೀರ್ ಲಾಲ್ ಛಾಯಾಗ್ರಹಣ, ಸುಭಾಷ್ ಆನಂದ್ ಸಂಗೀತ ನಿರ್ದೇಶನ, ರಾಘು ಕುಲಕರ್ಣಿ ಕಲಾ ನಿರ್ದೇಶನ, ಅಮ್ಮ ರಾಜಶೇಖರ್ ನೃತ್ಯ ನಿರ್ದೇಶನ, ಖಾಲಿ ಕಿಕಾಸ್ ಸಾಹಸ ನಿರ್ದೇಶನ ಹಾಗೂ ಪ್ರಭು ಅವರ ಸಂಕಲನವಿದೆ.
ಅರ್ಜುನ್ ಸರ್ಜಾ, ರಾಧಿಕಾ ಕುಮಾರಸ್ವಾಮಿ, ಜೆ.ಡಿ.ಚಕ್ರವರ್ತಿ, ಅಮೀರ್ ಖಾನ್ ಸಹೋದರ ಫೈಸಲ್ ಖಾನ್ , ಸೋನಿ ಚರಿಶ್ಟಾ, ವಿಶ್ವನಾಥ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.