ಬೆಂಗಳೂರು: ಎಣ್ಣೆ ಇಲ್ಲದೆ 42 ದಿನಗಳನ್ನು ಮುಗಿಸಿದ ಮದ್ಯಪ್ರಿಯರಿಗೆ ಸರ್ಕಾರ ಇಂದು ಬಿಗ್ ಶಾಕ್ ನೀಡಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಒಂದು ಕಡೆ ಕೋವಿಡ್ ನಿಯಂತ್ರಣ ಮತ್ತೊಂದು ಕಡೆ ಆರ್ಥಿಕ ಚಟುವಟಿಕೆ ಎರಡನ್ನೂ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಶೇ.11ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಈಗಾಗಲೇ ಶೇ.6 ರಷ್ಟು ಅಬಕಾರಿ ಸುಂಕ ಹೆಚ್ಚಳದ ಬಿಸಿ ಅನುಭವಿಸಿದ್ದ ಮದ್ಯಪ್ರಿಯರಿಗೆ ಈಗ ಮತ್ತೆ ಕೊರೊನಾ ಶಾಕ್ ನೀಡಿದೆ.
ರಾಜ್ಯದಲ್ಲಿ ಶೇ.17ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡುವುದಾಗಿ ತಿಳಿಸಿದ ಬಿಎಸ್ ವೈ, ಇನ್ನೆರಡು ದಿನಗಳಲ್ಲಿ ಹೊಸ ಆದೇಶ ಜಾರಿಗೊಳಿಸುವುದಾಗಿ ತಿಳಿಸಿದರು. ಇದೇ ವೇಳೆ ಲಾಕ್ ಡೌನ್ ಸಡಿಲಿಕೆಯಲ್ಲಿ ಪೂರ್ವ ಸಿದ್ಧತೆ ಬೇಕಿತ್ತು ಎಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ “ಕುಡಿಯುವವರು ಇರುವಾಗ ಏನು ಸಿದ್ಧತೆ ಮಾಡಬೇಕು ಎಂದು ಬಿಎಸ್ ವೈ ತಿರುಗೇಟು ನೀಡಿದರು.
ಇನ್ನು ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರೋರಿಗಾಗಿ ಸಿಎಂ ಯಡಿಯೂರಪ್ಪ ಸರ್ಕಾರ 1,610 ಕೋಟಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.








