ಮಾಜಿ ಸಿಎಂಸಿದ್ದರಾಮಯ್ಯ ಕ್ಷೇತ್ರದಲ್ಲಿ ಕೊರೊನಾ ರಣಕೇಕೆ ಶುರುವಿಟ್ಟಿದ್ದು, ಇಂದು ಒಂದೇ ದಿನ 13 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಡಾಣಕಶಿರೂರು ಗ್ರಾಮದ ಓರ್ವ ಗರ್ಭಿಣಿಯಿಂದ 12 ಜನರಿಗೆ ಸೋಂಕು ಹರಡಿದ್ದು, ಗರ್ಭಿಣಿಯ ಕಳ್ಳಕುಬಸ(ಸೀಮಂತ) ಕುತ್ತು ತಂದಿಟ್ಟಿತಾ ಎಂಬ ಅನುಮಾನ ಮೂಡುವಂತೆ ಮಾಡಿದೆ. ಡಾಣಕಶಿರೂರು ಒಂದೇ ಗ್ರಾಮದಲ್ಲಿ 12 ಜನರಿಗೆ ಸೋಂಕು ಪತ್ತೆಯಾಗಿದ್ದು, ಬಾದಾಮಿ ಪಟ್ಟಣದಲ್ಲಿ ಓರ್ವ ವಿದ್ಯಾರ್ಥಿನಿಗೂ ಇಂದೇ ಸೋಂಕು ದೃಢಪಟ್ಟಿದೆ.
ರೋಗಿ ನಂ:607 ರಿಂದ 12 ಜನರಿಗೆ ಸೋಂಕು ಹರಡಿದೆ.23 ವರ್ಷದ ಗರ್ಭಿಣಿಗೆ ಮೇ 3 ರಂದು ಸೋಂಕು ದೃಢವಾಗಿತ್ತು. ಹೀಗಾಗಿ ಡಾಣಕಶಿರೂರು ಗ್ರಾಮದಿಂದ ಒಟ್ಟು 124 ಜನರ ಸ್ಯಾಂಪಲ್ ಕಳಿಸಲಾಗಿತ್ತು. ರೋಣದ ಕೃಷ್ಣಾಪುರದಲ್ಲಿ ವಾಸವಿದ್ದ ಗರ್ಭಿಣಿ ಮಹಿಳೆ ಏಪ್ರಿಲ್ 01 ರಂದು ಬಾದಾಮಿ ತಾಲೂಕಿನ ಡಾಣಕಶಿರೂರು ಗ್ರಾಮಕ್ಕೆ ಬಂದಿದ್ದರು. ಏಪ್ರಿಲ್ 25 ಕ್ಕೆ ಮಹಿಳೆಗೆ ಜ್ವರ ಕಾಣಿಸಿಕೊಂಡಿತ್ತು. ಏಪ್ರಿಲ್ 29 ರಂದು ರೋಣದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ನಂತರ ಧಾರವಾಡದ ಎಸ್.ಡಿಎಂ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯನ್ನು ನಂತರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗರ್ಭಿಣಿಗೆ ಯಾರಿಂದ ಕೊರೊನಾ ಬಂತು ಎಂಬುದು ಇಂದಿಗೂ ನಿಗೂಢವಾಗಿಯೇ ಉಳಿದುಕೊಂಡಿದೆ. ಹೀಗಾಗಿ ಮಹಿಳೆಯ ಟ್ರಾವಲ್ ಹಿಸ್ಟರಿ ಬಗ್ಗೆ ಜಿಲ್ಲಾಡಳಿತ ಮಾಹಿತಿ ಕಲೆ ಹಾಕ್ತಿದೆ. ಇಂದು ಪತ್ತೆಯಾದ 13 ಕೊರೊನಾ ಪಾಸಿಟಿವ್ ಕೇಸ್ ಗಳಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 48 ಏರಿಕೆಯಾಗಿದ್ದು, ಅರ್ಧ ಶತಕದತ್ತ ಕಾಲಿಟ್ಟಿದೆ. ಇನ್ನು ರೋಗಿ ನಂ 680 ; 18 ವರ್ಷ ವಿದ್ಯಾರ್ಥಿನಿ ಬಾದಾಮಿ ಪಟ್ಟಣದ ನಿವಾಸಿಯಾಗಿದ್ದಾಳೆ.








