ಕನಸು ನನಸಾದಾಗ ಆ ಖುಷಿಗೆ ಪಾರವೇ ಇಲ್ಲ – ಆವೇಶ್ ಖಾನ್
ಆವೇಶ್ ಖಾನ್.. ಮಧ್ಯ ಪ್ರದೇಶದ ಯುವ ವೇಗಿ ಈಗ ಟೀಮ್ ಇಂಡಿಯಾದ ಸದಸ್ಯ.
ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಗೆ ಅಯ್ಕೆಯಾಗಿರುವ ಆವೇಶ್ ಖಾನ್ ಸಂತಸಕ್ಕೆ ಪಾರವೇ ಇಲ್ಲ.
ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿರುವ ಆವೇಶ್ ಖಾನ್ 24 ವಿಕೆಟ್ ಗಳನ್ನು ಉರುಳಿಸಿದ್ದಾರೆ.
ಇದೀಗ ಸಯ್ಯದ್ ಮುಷ್ತಾಕ್ ಆಲಿ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿರುವಾಗಲೇ ಟೀಮ್ ಇಂಡಿಯಾಗೆ ಆಯ್ಕೆಯಾಗಿರುವ ಸುದ್ದಿ ಹೊರಬಿದ್ದಿದೆ.
ದೇಶದ ಪರ ಆಡುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ಈ ಕನಸು ನನಸು ಮಾಡಲು ಸಾಕಷ್ಟು ಪರಿಶ್ರಮಪಡಬೇಕು.
ನನ್ನ ಕನಸು ಈಗ ನನಸಾಗಿದೆ ಎಂದು ಆವೇಶ್ ಖಾನ್ ಖುಷಿಯಿಂದಲೇ ಹೇಳಿಕೊಂಡಿದ್ದಾರೆ.
ಮಧ್ಯ ಪ್ರದೇಶದ ಪರ ಈಗಾಗಲೇ 27 ಪಂದ್ಯಗಳನ್ನು ಆಡಿರುವ ಆವೇಶ್ ಖಾನ್ ಅವರು 100 ವಿಕೆಟ್ ಗಳನ್ನು ಕೂಡ ಕಬಳಿಸಿದ್ದಾರೆ.
ಕಳೆದ ದೇಸಿಯ ಋತು ಮತ್ತು ಐಪಿಎಲ್ ನಲ್ಲಿ ನೀಡಿದ ಉತ್ತಮ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾಗೆ ಆಯ್ಕೆಯಾಗಲು ಸಾಧ್ಯವಾಯ್ತು.
ಅಲ್ಲದೆ ತನ್ನ ಕನಸನ್ನು ನನಸು ಮಾಡಲು ಸಹಕರಿಸಿದ್ದ ಅಮೇಯ್ ಖರಸಿಯಾ, ಚಂದ್ರಕಾಂತ್ ಪಂಡಿತ್,
ದೇವೇಂದ್ರ ಬಂಡೇಲಾ ಹಾಗೂ ಅಬ್ಬಾಸ್ ಆಲಿ ಅವರನ್ನು ಕೂಡ ಇದೇ ವೇಳೆ ಆವೇಶ್ ಖಾನ್ ಸ್ಮರಿಸಿಕೊಂಡಿದ್ದಾರೆ.
ಇನ್ನು ಮಗ ಆವೇಶ್ ಖಾನ್ ಟೀಮ್ ಇಂಡಿಯಾಗೆ ಆಯ್ಕೆಯಾದ ಸುದ್ದಿ ಕೇಳಿದ ತಕ್ಷಣವೇ ತಂದೆ ಆಶೀಕ್ ಖಾನ್ ಅವರ ಸಂತಸಕ್ಕೂ ಪಾರವೇ ಇಲ್ಲ.
ಇಂಧೋರ್ ಕೊಲ್ಟ್ಸ್ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಆವೇಶ್ ಖಾನ್ ಅವರ ಪ್ರತಿಭೆಯನ್ನು ಗುರುತಿಸಿದ್ದ ಅಮೇಯ್ ಖುರಸಿಯಾ.
ಆ ಬಳಿಕ ಅವರದ್ದೇ ಅಕಾಡೆಮಿಯಲ್ಲಿ ತರಬೇತಿ ನಡೆಸುತ್ತಿದ್ದ, ನಂತರ ಆತ ಹಿಂತಿರುಗಿ ನೋಡಲೇ ಇಲ್ಲ ಎಂದು ಆಶೀಕ್ ಖಾನ್ ಹೇಳಿಕೊಂಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಗೆ ಟೀಮ್ ಇಂಡಿಯಾದ ಸಾರಥಿಯಾಗಿ ರೋಹಿತ್ ಶರ್ಮಾ ನೇಮಕಗೊಂಡಿದ್ದಾರೆ.
ಅಲ್ಲದೆ ಈ ತಂಡದಲ್ಲಿ ಮೂವರು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಆವೇಶ್ ಖಾನ್ ಜೊತೆ ಹರ್ಷೆಲ್ ಪಟೇಲ್ ಮತ್ತು ವೆಂಕಟೇಶ್ ಅಯ್ಯರ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.









