ಬೆಂಗಳೂರು : ಕೊರೊನಾ ವೈರಸ್ ಕಾಟ ಮತ್ತು ಲಾಕ್ ಡೌನ್ ನಡುವೆ ಮದ್ಯ ಮಾರಾಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಮತಿ ನೀಡಿದ್ದೇ ತಡ ಮದ್ಯಪ್ರಿಯರು ಎಣ್ಣೆ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ಎಂದರೇ ಮಂಗಳವಾರ ಒಂದೇ ದಿನ ಕರ್ನಾಟಕದಲ್ಲಿ 197 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ. ಲಾಕ್ ಡೌನ್ ಮುನ್ನ ರಾಜ್ಯದಲ್ಲಿ ಸರಾಸರಿ 90 ರಿಂದ 95 ಕೋಟಿ ರೂಪಾಯಿ ಮದ್ಯ ಮಾರಾಟವಾಗುತ್ತಿತ್ತು.
2020-21ರ ಪ್ರಸಕ್ತ ಸಾಲಿನಲ್ಲಿ ಅಬಕಾರಿ ಇಲಾಖೆಯು ಬರೋಬ್ಬರಿ 26,440 ಕೋಟಿ ರೂಪಾಯಿ ಆದಾಯದ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಮಂಗಳವಾರ ಒಂದೇ ದಿನ 197 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದ್ದು ಹೊಸ ದಾಖಲೆ ಬರೆದಿದೆ.
ಮಂಗಳವಾರ ಒಂದೇ ದಿನ ಭಾರತದಲ್ಲಿ ತಯಾರಿಸಿದ 4.21 ಲಕ್ಷ ಬಾಕ್ಸ್ ಕೇಸಸ್ ಮದ್ಯವು ಮಾರಾಟವಾಗಿದೆ. 36.37 ಲಕ್ಷ ಲೀಟರ್ ಭಾರತೀಯ ಮದ್ಯವು ಸೇಲ್ ಆಗಿದ್ದು, ಇದರ ಮೊತ್ತ ಬರೋಬ್ಬರಿ 182 ಕೋಟಿ ರೂಪಾಯಿ ಆಗಿದೆ. ಅಲ್ಲದೇ 7.02 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದ್ದು, ಅದರ ಮೌಲ್ಯ 15 ಕೋಟಿ ಎನ್ನಲಾಗಿದೆ.
ಇನ್ನು ಸೋಮವಾರ ಒಂದೇ ದಿನದಲ್ಲಿ ಒಟ್ಟು 3.9 ಲಕ್ಷ ಲೀಟರ್ ಬಿಯರ್, 8.5 ಲಕ್ಷ ಲೀಟರ್ ಭಾರತೀಯ ತಯಾರಿಕಾ ಮದ್ಯ ಮಾರಾಟವಾಗಿದೆ. ಹೀಗಾಗಿ ಎರಡು ದಿನಗಳಲ್ಲೇ 242 ಕೋಟಿ ರೂಪಾಯಿ ಮದ್ಯ ಸೇಲ್ ಆಗಿದೆ.
ಇನ್ನು ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವ ಸರ್ಕಾರವು ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಒಂದು ಬಾರಿಗೆ ಒಬ್ಬ ವ್ಯಕ್ತಿಗೆ ಮೂರು ಬಾಟಲ್ ಆಲ್ಕೋಹಾಲ್ ಹಾಗೂ 650 ಎಂಎಲ್ ನ ಆರು ಬಿಯರ್ ಬಾಟಲ್ ಗಳನ್ನು ಖರೀದಿಸುವುದಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆವರೆಗೂ ಮಾತ್ರ ಮದ್ಯದ ಅಂಗಡಿಗಳನ್ನು ತೆರೆಯಲು ಸರ್ಕಾರವು ಅನುಮತಿ ನೀಡಿದೆ.