ನವದೆಹಲಿ : ‘ಸಾಕ್ಷಾತ್ಕಾರ, ಭಾರತದ ಸ್ವಯಂ ಸಾಕ್ಷಾತ್ಕಾರಕ್ಕೆ ಬುದ್ಧ ಸಂಕೇತ. ಈ ಸ್ವಯಂ ಸಾಕ್ಷಾತ್ಕಾರದ ಮೂಲಕ ಭಾರತವು ಮಾನವೀಯತೆ ಮತ್ತು ಜಗತ್ತಿನ ಹಿತಕ್ಕಾಗಿ ಕೆಲಸ ಮಾಡುತ್ತಿದೆ. ನಾವು ಇದೇ ರೀತಿ ಮುಂದುವರೆಯುತ್ತೇವೆ,’ ಎಂದು ಪ್ರಧಾನಿ ನರೇಂದ್ರ ಮೋದಿ ಬುದ್ಧನ ಸ್ಮರಿಸಿದ್ದಾರೆ .
ಇಂದು ಬುದ್ಧ ಪೂರ್ಣಿಮೆಯ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಸಿ ಪ್ರಧಾನಿ ಮಾತನಾಡಿದರು. ಮೊದಲು ‘ಬುದ್ಧ ಪೂರ್ಣಿಮೆಯ ಶುಭಾಶಯಗಳನ್ನು ತಿಳಿಸಿದ ಮೋದಿ ಕೊರೊನಾ ವಾರಿಯರ್ಸ್ ಗೆ ಧನ್ಯವಾದ ಅರ್ಪಿಸಿದರು. 2015,2018ರ ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೆ. ಇಂದಿನ ಪರಿಸ್ಥಿತಿಯಲ್ಲಿ ನಾನು ಬುದ್ಧ ಪೂರ್ಣಿಮೆ ಕಾರ್ಯಕ್ರಮಗಳಲ್ಲಿ ದೈಹಿಕವಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆಚರಣೆಯಲ್ಲಿ ನಿಮ್ಮಲ್ಲರೊಂದಿಗೆ ಭಾಗವಹಿಸುವುದು ನನಗೆ ಸಂತೋಷದ ವಿಚಾರ. ಆದರೆ ಇಂದಿನ ಸಂದರ್ಭಗಳು ನಾವೆಲ್ಲರೂ ಒಟ್ಟುಗೂಡಲು ಬಿಡುತ್ತಿಲ್ಲ,’ ಎಂದು ಹೇಳಿದರು.
‘ಪ್ರತಿಯೊಬ್ಬರ ಸಮಸ್ಯೆಗಳನ್ನು ನೀಗಿಸುವ ಬುದ್ಧನ ಸಂದೇಶ ಮತ್ತು ಸಂಕಲ್ಪವು ಭಾರತದ ಸಂಸ್ಕೃತಿಗೆ ಮಾರ್ಗದರ್ಶಕವಾಗಿದೆ. ಭಗವಾನ್ ಬುದ್ಧ ಭಾರತೀಯ ನಾಗರಿಕತೆ ಮತ್ತು ಸಂಪ್ರದಾಯದ ಸಮೃದ್ಧಿಗೆ ಕೊಡುಗೆ ನೀಡಿದ್ದಾನೆ. ಬುದ್ಧ ಬೆಳಕಾಗಿ ಮಾರ್ಪಟ್ಟವನು. ತನ್ನ ಪಯಣದಲ್ಲಿ ಇತರರ ಜೀವನಕ್ಕೆ ಬೆಳಕಾದವನು,’ ಎಂದು ಅಭಿಪ್ರಾಯಪಟ್ಟರು.
‘ದೇಶದ ಒಳಗಿರಬಹುದು, ಹೊರಗಿರಬಹುದು. ಇಂದು ಭಾರತವು ತೊಂದರೆಯಲ್ಲಿರುವ ಎಲ್ಲರಿಗೂ ಬೆಂಬಲವಾಗಿ ನಿಂತಿದೆ. ಭಾರತವು ಜಗತ್ತಿನಾದ್ಯಂತ ಇತರ ದೇಶಗಳಿಗೆ ಸಹಾಯ ಮಾಡಲು ನಿರಂತರವಾಗಿ ಕೆಲಸ ಮಾಡುತ್ತಿದೆ ಮತ್ತು ಅದೇ ದಾರಿಯಲ್ಲಿ ಮುಂದುವರಿಯುತ್ತದೆ. ಕೊರೊನಾ ವೈರಸ್ ಅನ್ನು ಸೋಲಿಸಲು ನಾವೆಲ್ಲರೂ ಒಟ್ಟಾಗಿ ಹೋರಾಡಬೇಕಾಗಿದೆ.’ ದಯೆ ಕರುಣೆ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಬುದ್ಧ ಹೇಳಿದ್ದಾನೆ. ಕೊರೊನಾ ಸಂಕಷ್ಟಕ್ಕೆ ಸಿಲುಕಿರುವವರಿಗೆ ಎಷ್ಟು ಸಾಧ್ಯವಾಗುತ್ತೋ ಅಷ್ಟು ಸಹಾಯ ಮಾಡಿ ಎಂದು ಮೋದಿ ಜನತೆಗೆ ಮನವಿ ಮಾಡಿದರು