ಆಂಧ್ರಪ್ರದೇಶ : ಎಲ್ ಜಿ ಪಾಲಿಮರ್ಸ್ ಫ್ಯಾಕ್ಟರಿಯಲ್ಲಿ ವಿಷ ಅನಿಲ ಸೋರಿಕೆಯಿಂದಾಗಿ 9 ಜನರು ಮೃತಪಟ್ಟಿದ್ದು, 5000ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ವಿಶಾಖಪಟ್ಟಣಂನ ಆರ್.ಆರ್. ವೆಂಕಟಪುರಂ ಗ್ರಾಮದಲ್ಲಿ ನಡೆದಿದೆ.
ಈಗಾಗಲೇ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ, ಆಂಬುಲೆನ್ಸ್ ಗಳೂ ತಲುಪಿದ್ದು, ಅಸ್ವಸ್ಥರನ್ನ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ಅಸ್ವಸ್ಥರು ಕಣ್ಣುರಿ ಹಾಗೂ ಉಸಿರಾಟದ ತೊಂದರೆಯಾಗುತ್ತಿದೆ ಅಂತ ಹೇಳುತ್ತಿದ್ದಾರೆ. ಇನ್ನು, ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳೀಯರಿಗೆ ತಮ್ಮ ಮನೆಗಳಿಂದ ಹೊರಗೆ ಬರದಂತೆ ವಿಶಾಖಪಟ್ಟಣಂ ಪಾಲಿಕೆ ಸೂಚಿಸಿತ್ತು. ಇದೀಗ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಫ್ಯಾಕ್ಟರಿಯ ಸುತ್ತಮುತ್ತಲ ನಿವಾಸಿಗಳು ಯಾವುದಾದರೂ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವುದು ಒಳಿತು ಎಂದು ಹೇಳಿದೆ. ಅಲ್ಲದೆ ಒದ್ದೆ ಬಟ್ಟೆಯನ್ನ ಮುಖಕ್ಕೆ ಮಾಸ್ಕ್ ರೀತಿ ಬಳಸಿ ನಿಮ್ಮ ಬಾಯಿ ಹಾಗೂ ಮೂಗನ್ನ ಮುಚ್ಚಿಕೊಳ್ಳಿ ಅಂತಲೂ ಪಾಲಿಕೆ ಸೂಚಿಸಿದೆ.
ಸದ್ಯ ಸಿಕ್ಕಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಳಗಿನ ತಡರಾತ್ರಿ 2.30ಕ್ಕೆ ಫ್ಯಾಕ್ಟರಿಯಿಂದ ಸೋರಿಕೆಯಾಗಿರುವುದು ಪಿವಿಸಿ ಗ್ಯಾಸ್ (ಸ್ಟಿರೈನ್) ಎನ್ನಲಾಗಿದೆ. ಇದು ಗಾಳಿಯಲ್ಲಿ ಬಹುಬೇಗನೆ ಮಿಶ್ರಣಗೊಳ್ಳುವುದರಿಂದ, ನೂರಾರು ಜನ ಗಾಳಿಯ ಜೊತೆಯಲ್ಲೇ ಇದನ್ನೂ ಉಸಿರಾಡಿದ್ದಾರೆ. ಹೀಗಾಗಿ ಅಸ್ವಸ್ಥರ ಸಂಖ್ಯೆ ಹೆಚ್ಚಾಗಿದೆ ಅಂತ ತಿಳಿದು ಬಂದಿದೆ.
ಈಗಾಗಲೇ ಘಟನೆಯ ಬಗ್ಗೆ ಸಿಎಂ ಜಗನ್ ಮೋಹನ್ ರೆಡ್ಡಿ ಸಂಪೂರ್ಣ ಮಾಹಿತಿಯನ್ನ ಪಡೆದಿದ್ದಾರೆ. ಸ್ಥಳೀಯರ ಸುರಕ್ಷತೆಗೆ ಏನೆಲ್ಲಾ ಕ್ರಮಗಳನ್ನ ಕೈಗೊಳ್ಳಬೇಕೋ ಅದನ್ನ ತೆಗೆದುಕೊಳ್ಳಿ ಅಂತಲೂ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಅವರು ಸಹ ವೈಜಾಗ್ ಗೆ ತೆರಳಲಿದ್ದು, ಕಿಂಗ್ ಜಾರ್ಜ್ ಆಸ್ಪತ್ರಗೆ ಭೇಟಿ ನೀಡಲಿದ್ದಾರೆ.








