ಜೀವನೋಪಾಯಕ್ಕೆ ಸಾಂಪ್ರದಾಯಿಕ ವೃತ್ತಿಯನ್ನು ಅವಲಂಬಿಸಿರುವ ವಿವಿಧ ಸಮುದಾಯಗಳ ಮುಖಂಡರು ಇಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಕೊರೊನಾ ಪ್ಯಾಕೇಜ್ ನಲ್ಲಿ ಸರ್ಕಾರ ತಮ್ಮನ್ನು ಕಡೆಗಣಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಖಿಲ ಕರ್ನಾಟಕ ಗಾಣಿಗ ಮಹಾಸಭಾ, ಶ್ರೀ ಭಾವಸಾರ ಕ್ಷತ್ರಿಯ ಸಮಾಜ (ದರ್ಜಿಗಳು) ಶ್ರೀ ವಿಶ್ವಕರ್ಮ ಸೇವಾ ಸಮಿತಿ ಶ್ರೀ ಸೋಮವಂಶ ಆರ್ಯ ಕ್ಷತ್ರಿಯ ಸೇವಾ ಸಂಘ, ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಮಹಾ ಒಕ್ಕೂಟ, ಅಲೆಮಾರಿಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸಿದ್ದರಾಮಯ್ಯರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮನವಿ ಪತ್ರಗಳನ್ನು ಸಲ್ಲಿಸಿದರು.
ವಿದ್ಯುತ್ ಮಗ್ಗ ನೇಕಾರರು, ಗಾಣಿಗರು, ಕುಂಬಾರ, ಕಮ್ಮಾರ, ಮೇದರು, ದರ್ಜಿಗಳು, ವಿಶ್ವಕರ್ಮ, ಅಲೆಮಾರಿಗಳು, ಬುಡಕಟ್ಟು ಸಮುದಾಯ, ಉಪ್ಪಾರರು, ಅರ್ಚಕರು, ಮಂಗಳವಾದ್ಯ ನುಡಿಸುವವರು, ಕಲಾವಿದರು, ಛಾಯಾಗ್ರಾಹಕರನ್ನು ಕೊರೊನಾ ಪ್ಯಾಕೇಜ್ ನಲ್ಲಿ ಸೇರಿಸದಿರುವ ಬಗ್ಗೆ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ. ಲಕ್ಷ್ಮಿನಾರಾಯಣ ಅವರೂ ಸಿದ್ದರಾಮಯ್ಯರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ನಿನ್ನೆ ಘೋಷಣೆ ಮಾಡಿರುವ ಪ್ಯಾಕೇಜ್ ನಲ್ಲಿ ಸವಿತಾ ಸಮಾಜ, ನೇಕಾರರು ಹಾಗೂ ಮಡಿವಾಳ ಸಮುದಾಯದವರಿಗೆ ಮಾತ್ರ ನೆರವು ಘೋಷಣೆ ಮಾಡಿದ್ದಾರೆ. ಆದರೆ, ಆ ವರ್ಗದವರಿಗೂ ನೆರವು ಸೂಕ್ತ ಪ್ರಮಾಣದಲ್ಲಿ ಸಿಕ್ಕಿಲ್ಲ ಎಂದು ಮುಖಂಡರು ದೂರಿದ್ದಾರೆ.








