ನವದೆಹಲಿ : ದೇಶದಲ್ಲಿ ಕೊರೊನಾ ಅಬ್ಬರ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ 3390 ಹೊಸ ಪ್ರಕರಣಗಳು ವರದಿಯಾಗಿದ್ದು, 103 ಮಂದಿ ಸಾವಿಗೀಡಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 56,342ಕ್ಕೇರಿದೆ. ಇಲ್ಲಿಯವರೆಗೂ ಒಟ್ಟು 1886 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಗುರುವಾರ ಬೆಳ್ಳಗೆಯಿಂದ ಶುಕ್ರವಾರ ಬೆಳಗ್ಗೆವರೆಗೂ 3390 ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಂದೇ ದಿನ 103 ಜನರು ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 37,916 ಪ್ರಕರಣಗಳು ಸಕ್ರಿಯವಾಗಿವೆ. ಇವರೆಲ್ಲಾ ದೇಶದ ವಿವಿಧ ಆಸ್ಪತ್ರೆಗಳಲ್ಲಿ ಹಾಗೂ ವಿವಿಧ ಕ್ವಾರಂಟೈನ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೂ 16,539 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಗುಣಮುಖರಾಗಿದ್ದಾರೆ.
ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್, ದೆಹಲಿ, ತಮಿಳುನಾಡು, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಮಹಾರಾಷ್ಟ್ರದಲ್ಲಿ 16,758, ತಮಿಳುನಾಡಿನಲ್ಲಿ 4,829, ದೆಹಲಿಯಲ್ಲಿ 5,532, ಗುಜರಾತ್ನಲ್ಲಿ 6,625, ಮಧ್ಯಪ್ರದೇಶದಲ್ಲಿ 3,318 ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಕನಿಷ್ಠ 531 ಪೊಲೀಸ್ ಸಿಬ್ಬಂದಿಯಲ್ಲಿ ಕೋವಿಡ್-19 ದೃಢಪಟ್ಟಿದೆ.
ಇನ್ನು ತಮಿಳುನಾಡಿನಲ್ಲಿ ಒಂದೇ ದಿನ 580 ಹೊಸ ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ರಾಜ್ಯದಲ್ಲಿ 3,822 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.








