ಬೆಂಗಳೂರು : ಭಾರತದಲ್ಲಿ ಜೂನ್, ಜುಲೈ ಅಂತ್ಯಕ್ಕೆ ಕೊರೊನಾ ಇನ್ನಿಲ್ಲದಂತೆ ಬಾಧಿಸಲಿದೆ. ಆದರೆ ಬೆಂಗಳೂರಿಗೆ ಮಾತ್ರ ಮೇ ತಿಂಗಳೇ ಕಂಟಕವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಮುಂದಿನ ವಾರ ಬೆಂಗಳೂರಿನಲ್ಲಿ ಮತ್ತಷ್ಟು ಕೊರೊನಾ ಹೆಚ್ಚಳವಾಗಲಿದ್ದು, ಮೇ ಅಂತ್ಯಕ್ಕೆ 5 ಸಾವಿರ ಪ್ರಕರಣ ಪತ್ತೆಯಾಗಬಹುದು. ಲಾಕ್ ಡೌನ್ ಸಡಿಲಿಕೆ ಆಗಿ ನಾಲ್ಕು ದಿನದಲ್ಲಿ ಅಂತಹ ಕಂಟಕ ಬೆಂಗಳೂರಿಗೆ ಎದುರಾಗಿಲ್ಲ. ಆದರೆ ಮುಂದಿನ ವಾರ ಹೈ ರಿಸ್ಕ್ ಎದುರಾಗಲಿದೆ ಅಂತ ತಜ್ಞರು ಹೇಳಿದ್ದಾರೆ. ಅಲ್ಲದೆ ಕೊರೊನಾ ಕಂಟ್ರೋಲ್ ಗೆ ಪ್ಲಾನ್ ಬಿ ಸೂತ್ರ ರೆಡಿ ಮಾಡುವಂತೆ ಸಲಹೆ ನೀಡಿದ್ದಾರೆ. ಸೋಂಕು ಪೀಡಿತ ದೇಶದಿಂದ ಬರುವವರ ಮೇಲೆ ಹದ್ದಿನ ಕಣ್ಣು ಇಡಲು ಸೂಚಿಸಿದ್ದಾರೆ.
ಏನಿದು ‘ಪ್ಲ್ಯಾನ್ ಬಿ’ ಸೂತ್ರ..!
ಗ್ರೀನ್ ಝೋನ್ ಎಂದು ನಿರ್ಲಕ್ಷ್ಯ ಮಾಡದೇ ಎಲ್ಲಾ ವಾರ್ಡ್ ಗಳಲ್ಲಿ ಮತ್ತಷ್ಟು ತಂಡಗಳ ರಚನೆ ಮಾಡುವುದು. ಜೊತೆಗೆ ನಿರಂತರ ಹೆಲ್ತ್ ಸ್ಕ್ರೀನಿಂಗ್ ಮಾಡುವುದು. ಮುಖ್ಯವಾಗಿ ಸಿಸಿಟಿವಿ ಅಳವಡಿಸಿ, ಸಿಕ್ಕಸಿಕ್ಕಲ್ಲಿ ಉಗುಳುವವರ ವಿರುದ್ಧ ಕಠಿಣ ಕ್ರಮತೆಗೆದುಕೊಳ್ಳುವುದು. ಬಿಬಿಎಂಪಿ ವಿಪತ್ತು ನಿರ್ವಹಣ ಕೋಶ ಸದ್ಬಳಕೆ ಮಾಡಿಕೊಂಡು ಕಾರ್ಮಿಕರು, ದುರ್ಬಲರು, ಗರ್ಭಿಣಿಯರು, ವಯಸ್ಸಾದವರ ಡೇಟಾ ಬೇಸ್ ರೆಡಿ ಮಾಡುವುದು.
ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬಲಪಡಿಸಿ, ಜನ ಖಾಸಗಿ ಆಸ್ಪತ್ರೆಗಳತ್ತ ಹೆಚ್ಚು ಹೋಗದಂತೆ ಗಮನ ಹರಿಸಿ ಎಂದಿದ್ದಾರೆ ತಜ್ಞರು.








