ಕನಕದಾಸರ ಕೀರ್ತನೆಗಳು ಎಲ್ಲ ಕಾಲಘಟ್ಟದಲ್ಲೂ ಸಲ್ಲುವಂತಹವು- ವಸತಿ ಸಚಿವ ಸೋಮಣ್ಣ
ಬೆಂಗಳೂರು: ಕನಕದಾಸರ ಕೀರ್ತನೆಗಳು ಎಲ್ಲ ಕಾಲಘಟ್ಟದಲ್ಲಿಯೂ ಸಲ್ಲುವಂಥವು ಎಂದು ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಗೋವಿಂದರಾಜನಗರದ ಶಾಸಕರ ಕಚೇರಿಯಲ್ಲಿ ಕನಕದಾಸರ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನಕದಾಸರು ಸಹಜ ಬದುಕಿನಿಂದ ಕೀರ್ತನಕಾರರಾಗಿ, ತತ್ವಜ್ಞಾನಿ ಆಗಿ, ಸಂತರಾಗಿ, ದಾರ್ಶನಿಕರಾಗಿ ಕನ್ನಡ ನಾಡಿಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.
ಇವರು ಆಧುನಿಕ ಕರ್ನಾಟಕದ ಕವಿ, ತತ್ವಜ್ಞಾನಿ, ಸಂಗೀತಗಾರರಾಗಿ ಖ್ಯಾತರು.
ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಕನ್ನಡದಲ್ಲಿ ಕೀರ್ತನೆಗಳನ್ನು ರಚಿಸಿದ ಕನಕದಾಸರ ಸ್ಮರಣೆಯಲ್ಲಿ ಗೋವಿಂದರಾಜನಗರದ ನಾಗರಭಾವಿ ಯಲ್ಲಿ ಕನಕ ಭವನವನ್ನು ನಿರ್ಮಿಸಲಾಗುತ್ತಿದೆ.
ಕಾಮಗಾರಿ ಅಂತಿಮ ಹಂತದಲ್ಲಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗಲಿದೆ.
ಇದರ ಜೊತೆಗೆ ಕನಕದಾಸರ ಪುತ್ಥಳಿಯನ್ನು ನಿರ್ಮಿಸಲಾಗುತ್ತಿದ್ದು ಈ ಮೂಲಕ ದಾಸಶ್ರೇಷ್ಠರಿಗೆ ಕ್ಷೇತ್ರದ ಜನರ ವತಿಯಿಂದ ಚಿಕ್ಕ ಗೌರವ ಸಮರ್ಪಣೆಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಹಾಲುಮತ ಸಮುದಾಯದ ಮುಖಂಡರಾದ ಟಿ.ಬಿ.ಬೆಳಗಾವಿ, ಬಿಬಿಎಂಪಿ ಮಾಜಿ ಸದಸ್ಯರಾದ ವಾಗೀಶ್, ರೂಪ ಲಿಂಗೇಶ್ವರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.