ದೇಶಾದ್ಯಂತ ಮದ್ಯದಂಗಡಿಗಳಲ್ಲಿ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಮದ್ಯಪ್ರಿಯರು ಮದ್ಯ ಖರೀದಿಸಲು ಗುಂಪು ಗುಂಪಾಗಿ ಸೇರುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ರಾಜ್ಯಸರ್ಕಾರಗಳಿಗೆ ಹೋಮ್ ಡೆಲಿವರಿಯನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದೆ.
ಕೆಲ ರಾಜ್ಯಗಳು ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ) ಸಲ್ಲಿಸಿದ್ದವು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸಂಜಯ್ ಕಿಶನ್ ಕೌಲ್ ಮತ್ತು ಬಿ.ಆರ್.ಗವಾಯಿ ಅವರನ್ನು ಒಳಗೊಂಡ ನ್ಯಾಯ ಪೀಠವು ಪ್ರಕರಣವನ್ನು ಆಲಿಸಿತು. ಮದ್ಯದಂಗಡಿ ಬಂದ್ ಮಾಡುವ ಕುರಿತು ನಾವು ಯಾವುದೇ ಆದೇಶ ನೀಡಲು ಬಯಸುವುದಿಲ್ಲ. ಆದರೆ ರಾಜ್ಯ ಸರ್ಕಾರಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮದ್ಯವನ್ನು ಹೋಮ್ ಡೆಲಿವರಿ ಮೂಲಕ ಗ್ರಾಹಕರಿಗೆ ತಲುಪಿಸಬಹುದು ಎಂದು ನ್ಯಾಯ ಪೀಠವು ಅಭಿಪ್ರಾಯಪಟ್ಟಿತು.
ಅರ್ಜಿದಾರರ ಪರ ವಕೀಲ ದೀಪಕ್ ಸಾಯಿ ಅವರನ್ನು ನ್ಯಾಯಮೂರ್ತಿ ಎಸ್.ಕೆ.ಕೌಲ್ ಅವರು ಮದ್ಯವನ್ನು ಹೋಮ್ ಡೆಲಿವರಿ ಮಾಡುವ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ನಾವು ಏನು ಮಾಡಬೇಕೆಂದು ನೀವು ಬಯಸುತ್ತೀರಿ ಎಂದು ಪ್ರಶ್ನಿಸಿದರು.
ಅದಕ್ಕೆ ವಕೀಲ ದೀಪಕ್ ಸಾಯಿ ಮದ್ಯ ಮಾರಾಟದಿಂದ ಸಾಮಾನ್ಯ ಜನರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಬಾರದು ಎಂದು ಬಯಸುತ್ತೇನೆ. ಮದ್ಯ ಮಾರಾಟದ ಬಗ್ಗೆ ರಾಜ್ಯಗಳಿಗೆ ಗೃಹ ಸಚಿವಾಲಯವು ಸ್ಪಷ್ಟೀಕರಣವನ್ನು ನೀಡಬೇಕು ಎಂದು ವಾದಿಸಿದರು.
ಮದ್ಯ ಮಾರಾಟಕ್ಕೆ ತಡೆ ನೀಡಲು ಸಾಧ್ಯವಿಲ್ಲವೆಂದು ಅರ್ಜಿಯನ್ನು ವಜಾಗೊಳಿಸಿದ ನ್ಯಾಯ ಪೀಠವು ರಾಜ್ಯ ಸರ್ಕಾರಗಳು ಮದ್ಯದಂಗಡಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ಜನಸಂದಣಿ ಕಡಿಮೆಗೊಳಿಸಲು ಹೋಮ್ ಡೆಲಿವರಿ ಅಳವಡಿಸಿಕೊಳ್ಳಬಹುದು ಎಂದು ಸಲಹೆ ನೀಡಿತು.
ಲಾಕ್ ಡೌನ್ ಹಿನ್ನೆಲೆಯಲ್ಲಿ ಆಹಾರ ಪದಾರ್ಥ ಡೆಲಿವರಿ ಮಾಡುತ್ತಿದ್ದ ಝೊಮ್ಯಾಟೊ ಕಂಪನಿ ದಿನಸಿ ಪದಾರ್ಥಗಳನ್ನೂ ಡೆಲಿವರಿ ಮಾಡುತ್ತಿದ್ದು, ಇದೀಗ ಮದ್ಯವನ್ನು ಹೋಮ್ ಡೆಲಿವರಿ ಮಾಡಲು ಚಿಂತನೆ ನಡೆಸಿದೆ. ಈ ಕಾರಣಕ್ಕಾಗಿ ಸುಪ್ರೀಂ ಕೋರ್ಟ್ ಮದ್ಯವನ್ನು ಹೋಮ್ ಡೆಲಿವರಿ ಮೂಲಕ ಮಾರಬಹುದು ಎಂದು ಸಲಹೆ ನೀಡಿದೆ ಎಂಬ ಅಭಿಪ್ರಾಯ ಇದೀಗ ವ್ಯಕ್ತವಾಗಿದೆ.








