ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ವಿಶ್ವವೇ ತಲ್ಲಣಗೊಂಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಮೆರಿಕಾದ ವೈಟ್ ಹೌಸ್ ನ ರೋಸ್ ಗಾರ್ಡನ್ ನಲ್ಲಿ ಜನರ ಆರೋಗ್ಯ ಹಾಗೂ ಸುರಕ್ಷತೆಗಾಗಿ ಶಾಂತಿ ಮಂತ್ರ ಪಠಣವನ್ನು ಮಾಡಲಾಗಿದೆ. ಗುರುವಾರ ಹಿಂದೂ ಪುರೋಹಿತರೊಬ್ಬರು ಶಾಂತಿ ಮಂತ್ರವನ್ನು ಪಠಣೆ ಮಾಡಿದ್ದಾರೆ. ಅಮೆರಿಕಾದ ವೈಟ್ ಹೌಸ್ ನ ರೋಸ್ ಗಾರ್ಡನ್ ನಲ್ಲಿ ಎಲ್ಲಾ ಧರ್ಮಗಳ ಧರ್ಮಗುರುಗಳ ಉಪಸ್ಥಿತಿಯಲ್ಲಿ ಅಮೆರಿಕದ ರಾಷ್ಟ್ರೀಯ ಪ್ರಾರ್ಥನಾ ಸೇವೆಯ ದಿನ ಈ ಶಾಂತಿ ಪ್ರಾರ್ಥನೆ ಮಾಡಿಸಲಾಗಿದೆ. ಗುರುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ ನ್ಯೂಜೆರ್ಸಿಯ ಬಿಎಪಿಎಸ್ ಸ್ವಾಮಿ ನಾರಾಯಣ ಮಂದಿರದಲ್ಲಿ ಪುರೋಹಿತರಾಗಿರುವ ಹರೀಶ್ ಬ್ರಹ್ಮಭಟ್ ಅವರು ವೈಟ್ ಹೌಸ್ ನ ರೋಸ್ ಗಾರ್ಡನ್ ನಲ್ಲಿ ನಡೆದ ಶಾಂತಿ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿನ ಜನರ ಆರೋಗ್ಯ ಹಾಗೂ ಸುರಕ್ಷತೆಗಾಗಿ ಶಾಂತಿ ಮಂತ್ರ ಪಠಣವನ್ನು ಮಾಡಿದ್ದಾರೆ.
ಮಂತ್ರ ಪಠಣೆಯ ಕಾರ್ಯವನ್ನು ನಡೆಸಿಕೊಟ್ಟ ಹರೀಶ್ ಬ್ರಹ್ಮ ಭಟ್ ಅವರು ಕೊರೊನಾ ವೈರಸ್ ಮತ್ತು ಲಾಕ್ಡೌನ್ನಿಂದ ಸಂಕಷ್ಟಕ್ಕೆ ಗುರಿಯಾಗಿರುವ ಈ ಸಂದರ್ಭದಲ್ಲಿ ಜನರು ಆತಂಕ ಪಡಬಾರದು ಎಂದಿದ್ದಾರೆ.
ಪರಿಸ್ಥಿತಿಯ ತೀವ್ರತೆಯಿಂದ ಜನರು ಆತಂಕಕ್ಕೆ ಒಳಗಾದಾಗ ಇದು ಶಾಂತಿಯನ್ನು ಕೂಡಾ ಭಂಗ ಮಾಡುತ್ತದೆ. ಆದರೆ ಶಾಂತಿ ಮಂತ್ರವು, ಲೌಕಿಕ ಸಂಪತ್ತು, ಯಶಸ್ಸು, ಖ್ಯಾತಿಯನ್ನೂ ಮೀರಿ ಶಾಂತಿಗಾಗಿ ಸಲ್ಲಿಸುವ ಪ್ರಾರ್ಥನೆಯಾಗಿದೆ. ಇದು ಶಾಂತಿಯನ್ನು ಕೋರುವ ಹಿಂದೂ ಪ್ರಾರ್ಥನೆಯೆಂದೂ, ಯಜುರ್ವೇದ ಮೂಲದ ವೈದಿಕ ಮಂತ್ರ ಎಂದು ವಿವರಿಸಿ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಹರೀಶ್ ಬ್ರಹ್ಮ ಭಟ್ ಅವರ ಪ್ರಾರ್ಥನೆ ಹಾಗೂ ಮಂತ್ರ ಪಠಣೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.








