ಬೆಂಗಳೂರು : ವಿಶ್ವವನ್ನೇ ತಲ್ಲಣಗೊಳಿಸಿರುವ ಹೆಮ್ಮಾರಿ ಕೊರೊನಾ ವೈರಸ್ ಆರ್ಥಿಕತೆಗೆ ಪೆಟ್ಟು ನೀಡಿದ್ದಲ್ಲದೇ ಕೌಟುಂಬಿಕ ನೆಮ್ಮದಿಯನ್ನೂ ಕಸಿದುಕೊಂಡಿದೆ. ಹೌದು..! ಲಾಕ್ ಡೌನ್ ಹಿನ್ನೆಲೆ ಎಲ್ಲರಿಗೂ ಮನೆಯವರ ಜೊತೆ ಕಾಲ ಕಳೆಯಲು ಸಮಯ ಸಿಕ್ತು. ಒಂದೆಡೆ ಕುಟುಂಬಸ್ಥರೆಲ್ಲ ಒಟ್ಟಿಗೆ ಇರೋಕೆ ಅವಕಾಶ ಸಿಕ್ಕರೆ, ಮತ್ತೊಂದೆಡೆ ಇದೇ ಲಾಕ್ ಡೌನ್ ಕೌಟುಂಬಿಕ ಕಲಹಕ್ಕೂ ಕಾರಣವಾಗಿದೆ. ಅದ್ರಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ, ಸೆಕ್ಸ್ ಗೆ ಒತ್ತಾಯದಂತಹ ನೂರಾರು ಪ್ರಕರಣಗಳು ವನಿತಾ ಸಹಾಯವಾಣಿಯ ಕದ ತಟ್ಟಿವೆ.
ಲಾಕ್ ಡೌನ್ ಹಿನ್ನೆಲೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಹೊಂದಿಕೊಂಡಂತೆ ಇರುವ ವನಿತಾ ಸಹಾಯವಾಣಿ, ಫೋನ್ ಕಾಲ್ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಿತ್ತು. ಆದ್ರೆ ಕೌಟುಂಬಿಕ ಕಲಹದ ವಿಚಿತ್ರ ಕೇಸ್ ಗಳು ಅವರಿಗೆ ತಲೆನೋವಾಗಿ ಪರಿಣಮಿಸಿವೆ. ಕಳೆದ ಒಂದೂವರೆ ತಿಂಗಳಲ್ಲಿ ಬರೋಬ್ಬರಿ 620 ಕೇಸ್ ಗಳು ದಾಖಲಾಗಿವೆ ಎಂದು ವನಿತಾ ಸಹಾಯವಾಣಿ ಮೂಲಗಳು ತಿಳಿಸಿವೆ.
ಸೆಕ್ಸ್ ಗೆ ಒತ್ತಾಯಿಸಿ ಪತ್ನಿಗೆ ಹಿಂಸೆ ಕೊಟ್ಟ ಕೇಸ್ ಗಳೇ ಹೆಚ್ಚು..!
ಕಳೆದೊಂದು ತಿಂಗಳಿನಿಂದ ಬಂದ 620 ದೂರುಗಳಲ್ಲಿ ದೌರ್ಜನ್ಯ ದೂರುಗಳು ಒಂದೆಡೆಯಾದ್ರೆ, ಮತ್ತೊಂದೆಡೆ ಸೆಕ್ಸ್ ಗೆ ಸಹಕರಿಸಲ್ಲ ಅಂದಿದ್ದಕ್ಕೆ ಪತ್ನಿಗೆ ಹೊಡೆದಿರುವ ಕೇಸ್ ಗಳು ದಾಖಲಾಗಿವೆ. ಸುಮಾರು 193 ಪ್ರಕರಣಗಳು ಇದೇ ವಿಚಾರಕ್ಕೆ ಸಂಬಂಧಪಟ್ಟಿದ್ದು, ಇವುಗಳನ್ನು ಬಗೆಹರಿಸಲು ವನಿತಾ ಸಹಾಯವಾಣಿ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.
ವನಿತಾ ಸಹಾಯವಾಣಿ ಮೆಟ್ಟಿಲೇರಿರುವ ಪ್ರಕರಣಗಳು
ಕೋವಿಡ್-19 ಬೆಳಕಿಗೆ ಬಂದ ನಂತ್ರ ವನಿತಾ ಸಹಾಯವಾಣಿಯಲ್ಲಿ ಸುಮಾರು 620 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಅತಿ ಹೆಚ್ಚು ಕೌಟುಂಬಿಕ ಪ್ರಕರಣಗಳ ಸಂಖ್ಯೆ ಇದೆ. ಮಹಿಳೆಯರ ಮೇಲಿನ ದೌರ್ಜನ್ಯ-193 ಕೇಸ್ ಗಳು, ಮಹಿಳೆಗೆ ರಸ್ತೆಯಲ್ಲಿ ಸಮಸ್ಯೆ ಬಂದಾಗ ಸ್ಥಳಕ್ಕೆ ತೆರಳಿ ಹೊಯ್ಸಳ ಸಹಾಯ-8 ಕೇಸ್ ಗಳು. ಕುಟುಂಬದಲ್ಲಿ ಪ್ರತಿನಿತ್ಯ ಗಲಾಟೆ-56, ಮಕ್ಕಳ ಮೇಲಿನ ದೌರ್ಜನ್ಯ-6 ಕೇಸ್ ಗಳು ದಾಖಲಾಗಿವೆ.








