ಎಸಿಬಿಗೆ ಹೆಚ್ಚಿನ ಬಲ : ಬೊಮ್ಮಾಯಿ
ತುಮಕೂರು : ರಾಜ್ಯದಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಭ್ರಷ್ಟಾಚಾರ ನಿಗ್ರಹ ದಳ- ಎಸಿಬಿಗೆ ಹೆಚ್ಚಿನ ಬಲ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಭ್ರಷ್ಟಾಚಾರದ ವಿರುದ್ಧ ಕ್ರಮಕ್ಕೆ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಈ ವಿಚಾರ ನ್ಯಾಯಲಯದಲ್ಲಿರುವುದರಿಂದ ಪ್ರತಿಕ್ರಿಯಿಸುವುದಿಲ್ಲ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕ್ರಮ ಕೈಗೊಳ್ಳುವ ಅಧಿಕಾರ ಎಸಿಬಿಗೆ ಇದೆಯೇ ಹೊರತು ಲೋಕಾಯುಕ್ತರಿಗೆ ಇಲ್ಲ ಎಂದರು.
ಇದೇ ವೇಳೆ ಎಸಿಬಿಯ ಕಾರ್ಯವನ್ನು ಮೆಚ್ಚಿಕೊಂಡ ಬೊಮ್ಮಾಯಿ, ರಾಜ್ಯದಲ್ಲಿ ಎಸಿಬಿ ಉತ್ತಮ ಕೆಲಸ ಮಾಡುತ್ತಿದೆ.
ಭ್ರಷ್ಟಾಚಾರ ತಡೆಗಟ್ಟಲು ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ.
ಮುಂಬರುವ ದಿನಗಳಲ್ಲಿ ಎಸಿಬಿಗೆ ಹೆಚ್ಚಿನ ಬಲ ನೀಡಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಎಸಿಬಿ ದಾಳಿಯಾದ ಮೇಲೆ ಪ್ರಾಸಿಕ್ಯೂಷನ್ ಅನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.
ಅದರ ವಿಧಿ ವಿಧಾನಗಳನ್ನು ಮತ್ತಷ್ಟು ಬಲಿಷ್ಟಗೊಳಿಸಬೇಕು. ಕಡಿಮೆ ಅವಧಿಯಲ್ಲಿ ಆರೋಪ ಪಟ್ಟಿ ದಾಖಲಿಸಿ ವಿಚಾರಣೆ ಮುಗಿಸಲು ಎಸಿಬಿ ಮತ್ತು ಪ್ರಾಸಿಕ್ಯೂಷನ್ ಮಧ್ಯೆ ಹೊಂದಾಣಿಕೆ ರೂಪಿಸಬೇಕು.
ಈ ನಿಟ್ಟಿನಲ್ಲಿ ಇರುವ ಸಣ್ಣ ಪುಟ್ಟ ಲೋಪಗಳನ್ನು ಬಗೆಹರಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು.









