ಆಂಧ್ರ ಪ್ರದೇಶದಲ್ಲಿ ಹೆಚ್ಚಿದ ಮಳೆಯ ಆತಂಕ
ರಾಜ್ಯದಲ್ಲಿ ಭಾರಿ ಮಳೆಯ ನಂತರ ಪ್ರವಾಹದಿಂದಾಗಿ 44 ಜನರು ಸಾವನ್ನಪ್ಪಿದ್ದಾರೆ ಮತ್ತು 16 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಆಂಧ್ರಪ್ರದೇಶ ಸರ್ಕಾರ ಹೇಳಿದೆ, ಶನಿವಾರವೂ ಪರಿಸ್ಥಿತಿಯು ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮರಾವತಿಯಲ್ಲಿರುವ ಭಾರತೀಯ ಹವಾಮಾನ ಇಲಾಖೆ (IMD) ಕಚೇರಿಯು ಮುಂದಿನ ಮೂರ್ನಾಲ್ಕು ದಿನಗಳಲ್ಲಿ ರಾಯಲಸೀಮಾ ಮತ್ತು ದಕ್ಷಿಣ ಕರಾವಳಿ ಆಂಧ್ರದ ಕೆಲವು ಭಾಗಗಳಲ್ಲಿ ವಿಶೇಷವಾಗಿ ಚಿತ್ತೂರು ಮತ್ತು ನೆಲ್ಲೂರುಗಳಲ್ಲಿ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹೇಳಿದೆ.
ಇತ್ತೀಚಿಗೆ ಸುರಿದ ಭಾರಿ ಮಳೆಯಿಂದಾಗಿ ಈಗಾಗಲೇ ತುಂಬಿರುವ ಕೆರೆಗಳ ನೀರು ಕೊಡಿ ಬೀಳುವ ಸಾಧ್ಯತೆಯಿದ್ದು, ಕೆಳಭಾಗದ ಗ್ರಾಮಗಳು ಜಲಾವೃತಗೊಳ್ಳುವ ಸಾಧ್ಯತೆಯಿರುವುದರಿಂದ ರಾಜ್ಯ ಸರ್ಕಾರವು ಜಿಲ್ಲಾ ಅಧಿಕಾರಿಗಳನ್ನು ಹೈ ಅಲರ್ಟ್ನಲ್ಲಿ ಇರಿಸಿದೆ.
ಕಡಪ, ಚಿತ್ತೂರು, ಅನಂತಪುರ ಮತ್ತು ನೆಲ್ಲೂರು ಜಿಲ್ಲೆಗಳ 119 ಮಂಡಲಗಳ 1,990 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿದ್ದು, ಈ ಪೈಕಿ 211 ಗ್ರಾಮಗಳು ಸಂಪೂರ್ಣ ಜಲಾವೃತವಾಗಿವೆ ಎಂದು ರಾಜ್ಯ ಸರ್ಕಾರ ಶುಕ್ರವಾರ ಹೊರಡಿಸಿದ ಪ್ರಕಟಣೆ ತಿಳಿಸಿದೆ.
“ಈ ತಿಂಗಳ ಮೊದಲ ವಾರದ ನಂತರ ಆರಂಭವಾದ ಮಳೆ ಇಂದು ಕೂಡ ಸುರಿಯುತ್ತಿದೆ. ಇತಿಹಾಸದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ರಾಯಲಸೀಮಾವನ್ನು ಅತಿವೃಷ್ಟಿಯು ಮುಳುಗಿಸಿತು” ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.









