ಇಂಡೋ-ಕಿವೀಸ್ ಟೆಸ್ಟ್ ಮ್ಯಾಚ್ : ಅಕ್ಷರ್ ಸ್ಪಿನ್ ಮೋಡಿ.. ನ್ಯೂಜಿಲೆಂಡ್ 296ಕ್ಕೆ ಆಲೌಟ್
ಕಾನ್ಪುರ : ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ 296 ರನ್ ಗೆ ಆಲೌಟ್ ಆಗಿದೆ. ಆರಂಭದಲ್ಲಿ ಅಬ್ಬರಿಸಿದ ಕಿವೀಸ್ ಬ್ಯಾಟರ್ ಗಳ ಮೇಲೆ ಭಾರತೀಯ ಸ್ಪಿನ್ನರ್ ಗಳು ಸವಾರಿ ಮಾಡಿದ್ದಾರೆ. ಅಕ್ಸರ್ ಪಟೇಲ್- ಅಶ್ವಿನ್ ಸ್ಪಿನ್ ಮೋಡಿಗೆ ಸಿಲುಕಿದ ಕಿವೀಸ್ ಬ್ಯಾಟರ್ ಗಳು ಗಿರಗಿರನೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.
ಯಾವುದೇ ವಿಕೆಟ್ ನಷ್ಟವಿಲ್ಲದೇ 129 ರನ್ ಗಳೊಂದಿಗೆ ನ್ಯೂಜಿಲೆಂಡ್ ಮೂರನೇ ದಿನದಾಟವನ್ನು ಆರಂಭಿಸಿತು. ಟೀಂ ಇಂಡಿಯಾದ ಮೇಲೆ ಸವಾರಿ ಮಾಡಲು ಪ್ಲಾನ್ ಮಾಡಿಕೊಂಡು ಬಂದಿದ್ದ ಕಿವೀಸ್ ಆರಂಭಿಕರಿಗೆ ಅಶ್ವಿನ್ ಶಾಕ್ ನೀಡಿದರು. 89 ರನ್ ಗಳಿಸಿದ್ದ ವಿಲ್ ಯಂಗ್ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಬ್ರೇಕ್ ನೀಡಿದರು.
ಇದಾದ ಬಳಿಕ ಕ್ರೀಸ್ ಗೆ ಬಂದ ಕೇನ್ ವಿಲಿಯನ್ಸನ್ (18) ಉಮೇಶ್ ಯಾದವ್ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು. ಮತ್ತೆ ದಾಳಿಗೆ ಬಂದ ಅಶ್ವಿನ್ ರಾಸ್ ಟೈಲರ್ (11) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಒಂದು ಹಂತದಲ್ಲಿ ಟೀಂ ಇಂಡಿಯಾಗೆ ಕಬ್ಬಿಣದ ಕಡಲೆಯಾಗಿದ್ದ ಆರಂಭಿಕ ಆಟಗಾರ ಲಾಥಂ(95) ಗೆ ಅಕ್ಸರ್ ಖೆಡ್ಡಾ ತೋಡಿದ್ರು. ಇಲ್ಲಿಂದ ಕಿವೀಸ್ ಬ್ಯಾಟರ್ ಗಳ ಪೆವೀಲಿಯನ್ ಪರೇಡ್ ಆರಂಭವಾಯಿತು. ಭಾರತದ ಯುವ ಆಲ್ ರೌಂಡರ್ ಅಕ್ಸರ್ ಪಟೇಲ್ ಕಿವೀಸ್ ಬ್ಯಾಟರ್ ಗಳಿಗೆ ದುಸ್ವಪ್ನವಾಗಿ ಕಾಡಿದ್ರು. ಅಂತಿಮವಾಗಿ ನ್ಯೂಜಿಲೆಂಡ್ ತಂಡ 296ಕ್ಕೆ ಸರ್ವಪತನ ಕಂಡಿತು..
ಭಾರತದ ಪರ ಅಕ್ಸರ್ ಪಟೇಲ್ ಐದು ವಿಕೆಟ್ ಪಡೆದು ಮಂಚಿದರು. ಅಶ್ವಿನ್ 3 ವಿಕೆಟ್ ಪಡೆದರೇ ಉಮೇಶ್ ಯಾದವ್, ಜಡೇಜಾ ತಲಾ ಒಂದು ವಿಕೆಟ್ ಪಡೆದರು.