ಕಿವೀಸ್ ಆಲ್ ರೌಂಡರ್ ರಚಿನ್ ಹೆಸರು ಹುಟ್ಟಿದ್ದೇಗೆ ಗೊತ್ತಾ..? Rahul Dravid saaksha tv
ನ್ಯೂಜಿಲೆಂಡ್ ಆಲ್ ರೌಂಡರ್ ರಚಿನ್ ರವೀಂದ್ರ ಸದ್ಯ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಇದಕ್ಕೆ ಕಾರಣ ಅವರ ಹೆಸರು ಹಾಗೂ ಅವರ ಹಿನ್ನೆಲೆ.
ಹೌದು…! ರಚಿನ್ ರವೀಂದ್ರ ನ್ಯೂಜಿಲೆಂಡ್ ನ ಉದಯೋನ್ಮುಖ ಆಲ್ ರೌಂಡರ್. ಭಾರತ ವಿರುದ್ಧದ ಕಾನ್ಪುರ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಈ ಪಂದ್ಯದಲ್ಲಿ ಬೌಲಿಂಗ್ ನಲ್ಲಿ ಹೆಚ್ಚಾಗಿ ಮಿಂಚದೇ ಇದ್ದರೂ ತಮ್ಮ ಬ್ಯಾಟಿಂಗ್ ಮೂಲಕ ನ್ಯೂಜಿಲೆಂಡ್ ತಂಡವನ್ನು ಸೋಲಿನಿಂದ ಪಾರು ಮಾಡಿದರು.
ಮೊದಲ ಇನ್ನಿಂಗ್ಸ್ ನಲ್ಲಿ 23 ಎಸೆತಗಳನ್ನು ಎದುರಿಸಿದ್ದ ರಚಿನ್ 2 ಬೌಂಡರಿ ಸಹಿತ 13 ರನ್ ಗಳಿಸಿದ್ದರು. ಎರಡನೇ ಇನ್ನಿಂಗ್ಸ್ ನಲ್ಲಿ ಜವಾಬ್ದಾರಿಯುವ ಬ್ಯಾಟಿಂಗ್ ಮಾಡಿದ ರಚಿನ್, 91 ಎಸೆತಗಳನ್ನು ಎದುರಿಸಿ 18 ರನ್ ಗಳಿಸಿದರು. ಆ ಮೂಲಕ ಕಿವೀಸ್ ತಂಡವನ್ನು ಸೋಲಿನಿಂದ ಪಾರು ಮಾಡಿದರು.
ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನೇನು ಭಾರತ ಗೆದ್ದೇಬಿಡುತ್ತೆ ಅನ್ನುವಷ್ಟರಲ್ಲಿ ರಚಿನ್ ರವೀಂದ್ರ ಟೀಂ ಇಂಡಿಯಾದ ಗೆಲುವಿಗೆ ಅಡ್ಡಗೋಡೆಯಂತೆ ನಿಂತರು. ಅಂತಿಮವಾಗಿ ಹೋರಾಡಿ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಿದರು.
ಅಂದಹಾಗೆ ರಚಿನ್ ರವೀಂದ್ರ ಮತ್ತು ಏಜಾಜ್ ಪಟೇಲ್, ಮೂಲತಃ ಭಾರತೀಯರೇ. ಈ ಪೈಕಿ ರಚಿನ್ ರವೀಂದ್ರ ಅವರ ಮೂಲ ನಮ್ಮ ಬೆಂಗಳೂರು.
ರಚಿನ್ ಅವರ ತಂದೆ ರವಿ ಕೃಷ್ಣಮೂರ್ತಿ ಭಾರತದವರು. ಮೂಲತಃ ಬೆಂಗಳೂರಿನವರು. ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಕೃಷ್ಣಮೂರ್ತಿ ಬೇರೆ ಬೇರೆ ದೇಶಗಳಲ್ಲಿ ಕೆಲಸ ಮಾಡಿ ಕೊನೆಗೆ ನ್ಯೂಜಿಲೆಂಡ್ ನಲ್ಲಿ ನೆಲೆಸಿದ್ದಾರೆ. ಕ್ಲಬ್ ಮಟ್ಟದ ಕ್ರಿಕೆಟ್‍ನಲ್ಲಿ ತಮ್ಮೊಂದಿಗೆ ಕ್ರಿಕೆಟ್ ಆಡಿದ ಜಾವಗಲ್ ಶ್ರೀನಾಥ್ ಅವರೊಂದಿಗೆ ಉತ್ತಮ ಸ್ನೇಹ ಹೊಂದಿದ್ದಾರೆ.
ರವಿ ಕೃಷ್ಣಮೂರ್ತಿ ಅವರು ತಮ್ಮ ಮಗನಿಗೆ ರಚಿನ್ ಹೆಸರಿಡಲು ಒಂದು ಕಾರಣವಿದೆ. ಅದೇನಂದರೇ ರಚಿನ್ ಅನ್ನೋ ಹೆಸರಲ್ಲಿ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಸಂಯೋಜನೆ ಇದೆ. ರಾಹುಲ್ ಹೆಸರಲ್ಲಿನ `ರ’, ಸಚಿನ್ ಹೆಸರಲ್ಲಿನ `ಚಿನ್’ ಅಕ್ಷರಗಳನ್ನು ತೆಗೆದುಕೊಂಡು ರವಿ ಕೃಷ್ಣಮೂರ್ತಿ ಅವರು ರಚಿನ್ ಎಂದು ತಮ್ಮ ಮಗನಿಗೆ ನಾಮಕರಣ ಮಾಡಿದ್ದಾರೆ.