ರಾಜ್ಯ ಸಭಾ ಸದಸ್ಯರ ಅಮಾನತು – ವಿಪಕ್ಷದಿಂದ ಗದ್ದಲ, ಕಲಾಪ ಮುಂದೂಡಿಕೆ.
ಸಂಸತ್ತಿನಲ್ಲಿ ನಡೆಯುತ್ತಿರು ಚಳಿಗಾಲದ ಅಧಿವೇಶನ ವಿಪಕ್ಷಗಳ ಗದ್ದಲ ಬಲಿಯಾಗಿದೆ. ಎರಡನೇ ದಿನದ ಕಲಾಪ ಆರಂಭವಾಗುತ್ತಿದ್ದಂತೆಯೇ ರಾಜ್ಯಸಭಾ ಸಂಸದರ ಅಮಾನತು ವಿಚಾರವಾಗಿ ಪ್ರತಿಪಕ್ಷಗಳು ಗದ್ದಲ ಆರಂಭಿಸಿದವು. ಇದರಿಂದಾಗಿ ಲೋಕಸಭೆಯ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ. ಇದೇ ವೇಳೆ ರಾಜ್ಯಸಭೆಯಲ್ಲೂ ಪ್ರತಿಪಕ್ಷಗಳು ಈ ವಿಷಯವನ್ನು ಗಟ್ಟಿಯಾಗಿ ಪ್ರಸ್ತಾಪಿಸಿದವು. ರಾಜ್ಯಸಭೆಯಿಂದ ಅಮಾನತುಗೊಂಡಿರುವ 12 ಸಂಸದರ ವಿಚಾರದಲ್ಲಿ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಾರ್ಷಲ್‌ಗಳೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣಕ್ಕಾಗಿ ಈ ಸಂಸದರನ್ನು ಅಮಾನತುಗೊಳಿಸಲಾಗಿದೆ.
ಸಂಸದರ ಅಮಾನತು ಹಿಂಪಡೆಯಲು ಸಭಾಪತಿ ನಿರಾಕರಿಸಿದ್ದಾರೆ
ಇದೇ ವೇಳೆ 12 ಸಂಸದರ ಅಮಾನತು ಹಿಂಪಡೆಯಬೇಕೆಂಬ ಬೇಡಿಕೆಯನ್ನು ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು ತಿರಸ್ಕರಿಸಿದರು. ಅಮಾನತು ನಿರ್ಧಾರ ಸಾಂವಿಧಾನಿಕವಾಗಿದ್ದು, ಹಿಂಪಡೆಯುವುದಿಲ್ಲ ಎಂದು ಹೇಳಿದರು. ನಾಯ್ಡು ಅವರ ಈ ಘೋಷಣೆಯ ನಂತರ ಪ್ರತಿಪಕ್ಷಗಳ ಸಂಸದರು ರಾಜ್ಯಸಭೆಯಿಂದ ಹೊರನಡೆದರು. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅಮಾನತುಗೊಳಿಸಿರುವ ಸದಸ್ಯರ ಕುರಿತು ಮತ್ತೊಂದು ಸಭೆ ನಡೆಸುತ್ತಿದ್ದಾರೆ. ಸಂಸತ್ತಿನ ಗಾಂಧಿ ಪ್ರತಿಮೆಯ ಬಳಿ ರಾಜ್ಯ ಸಭಾ ಸದಸ್ಯರ ಅಮಾನತು ನಿರ್ಧಾರವನ್ನ ವಾಪಸ್ ತೆಗದುಕೊಳ್ಳಬೇಕು ಎಂದು ವಿಪಕ್ಷಗಳು ಪ್ರತಿಭಟನೆ ನಡೆಸಿದವು.
ಅಮಾನತುಗೊಂಡ ಸಂಸದರು ಕ್ಷಮೆಯಾಚಿಸಬೇಕು
ಅಮಾನತುಗೊಂಡ ಸಂಸದರು ಕ್ಷಮೆ ಕೇಳಬೇಕು ಎಂದು ಸರ್ಕಾರ ಹೇಳುತ್ತದೆ. ನಿನ್ನೆಯೂ ನಾವು ಅವರಿಗೆ ‘ನೀವು ಕ್ಷಮೆ ಕೇಳಬೇಕು’ ಎಂದು ಹೇಳಿದ್ದೆವು. ಆದರೆ ಅವರು ಸಾರಾಸಗಟಾಗಿ ನಿರಾಕರಿಸಿದರು. ಹೀಗಾಗಿ ನಾವು ಬಲವಂತದಿಂದ ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಅವರು ಸದನದಲ್ಲಿ ಕ್ಷಮೆಯಾಚಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.