ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳಿಸಿ ಮತ್ತು ನಮ್ಮ ರಾಜ್ಯದ ಕಾರ್ಮಿಕರನ್ನು ಇಲ್ಲಿಗೆ ಕರೆದುಕೊಂಡು ಬರುವ ಮೂಲಕ ತಮ್ಮ ಸಾಮಾಜಿಕ ಬದ್ಧತೆ ಮೆರೆದಿರುವ ಕೆಎಸ್‍ಆರ್‍ಟಿಸಿ ಸಿಬ್ಬಂದಿಗಳಿಗೆ ಅಥಣಿ ಪಟ್ಟಣದಲ್ಲಿ ಹೂವಿನ ಸುರಿಮಳೆಗೈದು ಅಭಿನಂದಿಸಲಾಗಿದೆ.
ಹೌದು ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ನಲವತ್ತೈದು ದಿನಗಳಿಂದ ಹಲವು ಕಡೆ ಸಿಲುಕಿದ್ದ ದುಡಿಯುವ ವರ್ಗದ ಜನರು ಕೂಲಿ ಕೆಲಸವೂ ಇಲ್ಲದೆ ಕೈಯ್ಯಲ್ಲಿ ಹಣವು ಇಲ್ಲದೆ ಹಸಿವಿನಿಂದ ಮತ್ತು ತೀವ್ರ ಸಂಕಷ್ಟದಿಂದ ಬಳಲುವ ಸ್ಥಿತಿ ಉಂಟಾಗಿತ್ತು.
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡ ಕಾರಣ ಕರ್ನಾಟಕ ಸೇರಿದಂತೆ ಪರರಾಜ್ಯಗಳಲ್ಲಿ ಸಿಲುಕಿದ್ದ ಕನ್ನಡಿಗ ವಲಸೆ ಕಾರ್ಮಿಕರನ್ನು ಕರೆ ತರಲು ಮತ್ತು ಪರರಾಜ್ಯದ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಬಿಟ್ಟು ಬರಲು ಸಾರಿಗೆ ಸಂಸ್ಥೆಯ ಸಿಬ್ಬಂದಿ ಶ್ರಮಿಸಿದ್ದು ಅವಶ್ಯಕ ಸೇವೆಗಳ ಅಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಸಾರಿಗೆ ಇಲಾಖೆಯ ಚಾಲಕ ಮತ್ತು ನಿರ್ವಾಹಕರನ್ನು ಪುಷ್ಪ ವೃಷ್ಟಿ ಮೂಲಕ ಗೌರವಿಸಲಾಯಿತು.








