ತಿರುವನಂತಪುರಂ : ಗುರುವಾಯೂರ್ ದೇವಸ್ವಂ ಮಂಡಲಿ ಕೇರಳ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿರುವ ವಿಚಾರವಾಗಿ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್, ಪಿಣರಾಯಿ ವಿಜಯನ್ ವಿರುದ್ಧ ಕಿಡಿಕಾರಿದ್ದಾರೆ. ಗುರುವಾಯೂರ್ ದೇವಸ್ವಂ ಮಂಡಲಿ ತನ್ನ ಶಾಶ್ವತ ಠೇವಣಿಯಿಂದ 5 ಕೋಟಿ ರೂ.ಗಳನ್ನು ಮುಖ್ಯಮಂತ್ರಿಯ ಪರಿಹಾರ ನಿಧಿಗೆ ದೇಣಿಗೆ ನೀಡಿದೆ ಎಂದಿರುವ ಸುರೇಂದ್ರನ್, ದೀಪ ಬೆಳಗಿಸಲು ಹೆಣಗಾಡುತ್ತಿರುವ ದೇವಾಲಯಗಳಿಗೆ ಈ ಮೊತ್ತವನ್ನು ಪಾವತಿಸಬೇಕಾಗಿತ್ತು. ಮುಖ್ಯಮಂತ್ರಿಯ ನಿಧಿ ಇತರ ಧಾರ್ಮಿಕ ಸಂಸ್ಥೆಗಳಿಂದ ಹಣವನ್ನು ಏಕೆ ಸ್ವೀಕರಿಸುತ್ತಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಗುರುವಾಯೂರ್ ದೇವಸ್ವಂ ಅವರು ಮುಖ್ಯಮಂತ್ರಿಯವರ ಪರಿಹಾರ ಪರಿಹಾರ ನಿಧಿಗೆ 5 ಕೋಟಿ ರೂ. ದೇಣಿಗೆ ನೀಡಿರುವುದು ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಇನ್ನು ದೇವಸ್ವಂ ಅಧ್ಯಕ್ಷ ಕೆ.ಬಿ ಮೋಹನ್ ದಾಸ್ ಅವರು ಜಿಲ್ಲಾಧಿಕಾರಿಗಳಿಗೆ 5 ಕೋಟಿ ರೂ ಮೊತ್ತದ ಚೆಕ್ ಹಸ್ತಾಂತರಿಸಿದ್ದು, ಇದು ದೇವಸ್ವಂನ ಸಾಮಾಜಿಕ ಜವಾಬ್ದಾರಿಯ ಒಂದು ಭಾಗವಾಗಿದೆ ಎಂದು ಹೇಳಿದ್ದಾರೆ. ಏತನ್ಮಧ್ಯೆ, ದೇವಾಸ್ವಂ ಆದಾಯದಿಂದ ಸಿಎಂಡಿಆರ್‌ಎಫ್ ಗೆ ನೀಡಿದ ಕೊಡುಗೆ ಕಾನೂನುಬದ್ಧವಲ್ಲ ಎಂದು ಬಿಜೆಪಿ ನಾಯಕ ಬಿ ಗೋಪಾಲಕೃಷ್ಣನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.