ಸಿ ಎಂ ನಾಳೆ ದೆಹಲಿ ಪ್ರಯಾಣ – ಕೋವಿಡ್ ಕುರಿತು ಚರ್ಚೆ
ಓಮಿಕ್ರಾನ್ ಕೊರೋನಾ ಸೋಂಕು ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯಾದ್ಯಂತ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶಗಳಿಂದ ಬರುವ ಪ್ರತಿಯೊಬ್ಬ ಪ್ರಯಾಣಿಕರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿಂದು ತಿಳಿಸಿದ್ದಾರೆ.
ವಿದೇಶದಿಂದ ಆಗಮಿಸುವ ಪ್ರಯಾಣಿಕರಿಗೆ ಮುಂಜಾಗ್ರತಾ ದೃಷ್ಟಿಯಿಂದ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದ್ದು, ನೆಗೆಟಿವ್ ವರದಿ ಬಂದರೂ ಸಹ ಅವರು ಕೆಲವು ದಿನ ಕ್ವಾರೆಂಟೈನ್ ನಲ್ಲಿ ಇರಬೇಕಾಗುತ್ತದೆ. ಪ್ರತಿಯೊಬ್ಬ ವಿದೇಶಿ ಪ್ರಜೆಯ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ ಎಂದರು.
ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಾಳೆ ದೆಹಲಿಗೆ ತೆರಳುತ್ತಿದ್ದು, ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಲಿದ್ದಾರೆ. “ಕೋವಿಡ್ ವೇಳೆ ಕಾರ್ಯ ನಿರ್ವಹಿಸಿದ ಆರೋಗ್ಯ ಮತ್ತು ಮುನ್ನೆಲೆ ಕಾರ್ಯಕರ್ತರು 2 ಡೋಸ್ ಲಸಿಕೆ ತೆಗೆದುಕೊಂಡು ಈಗಾಗಲೇ ಆರೇಳು ತಿಂಗಳು ಕಳೆದಿದೆ. ಹೀಗಾಗಿ ಅವರಿಗೆ ಬೂಸ್ಟರ್ ಡೋಸ್ ನೀಡುವ ಉದ್ದೇಶದಿಂದ ವೈಜ್ಞಾನಿಕವಾಗಿ ಆಗಿರುವ ಪ್ರಗತಿ ಮತ್ತು ಕೇಂದ್ರದ ಅನಿಸಿಕೆ ಕುರಿತು ಸಚಿವರೊಂದಿಗೆ ಚರ್ಚಿಸಲಿದ್ದೇನೆ” ಎಂದು ಮುಖ್ಯಮಂತ್ರಿ ತಿಳಿಸಿದರು.








