“ಸಹ್ಯಾದ್ರಿ ಶ್ರೇಣಿಯನ್ನೇ ಸರ್ವನಾಶ ಮಾಡಬಲ್ಲ ವಿನಾಶಕಾರಿ ಯೋಜನೆಗಳನ್ನು ತಡೆಯಬೇಕಲ್ಲವೇ”
ಕೃಪೆ – ಹಿಂದವಿ ಸ್ವರಾಜ್
ನಮಗೆಲ್ಲರಿಗೂ ಗೊತ್ತಿರುವ ಸಂಗತಿಯೇ ಇದು; ಪಶ್ಚಿಮ ಘಟ್ಟಗಳು ಏಷ್ಯಾ ಭೂಖಂಡದ ಶ್ವಾಸಕೋಶ. ದಖನ್ ಪ್ರಸ್ಥಭೂಮಿಯ ಪಶ್ಚಿಮದ ಅಂಚಿನುದ್ದಕ್ಕೂ ಹರಡಿ ಹಬ್ಬಿರುವ ಸಹ್ಯಾದ್ರಿ ಮಲೆಘಟ್ಟ ನಮ್ಮ ಸಮೃದ್ಧತೆಯ ಸಂಕೇತ. ದಕ್ಷಿಣದ ತುತ್ತತುದಿ ಕನ್ಯಾಕುಮಾರಿಯಿಂದ ಶುರುವಾಗಿ ಮಹಾರಾಷ್ಟ್ರ-ಗುಜರಾತ್ ಗಡಿ ತಪತಿ ನದಿಯವರೆಗೂ ವಿಶಾಲವಾಗಿ ಹಬ್ಬಿಸುವ ಪಶ್ಚಿಮಘಟ್ಟಗಳ ಒಟ್ಟು ಉದ್ದ ಬರೋಬ್ಬರಿ ೧೬೦೦ ಕಿಲೋಮೀಟರ್. ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳನ್ನು ಬಳಸಿಕೊಂಡು ನಿಂತಿರುವ ಈ ಪಶ್ಚಿಮ ಘಟ್ಟದ ಸಿಂಹಪಾಲು ನಮ್ಮ ರಾಜ್ಯದ್ದು ಅನ್ನುವುದು ನಮ್ಮ ಹೆಮ್ಮೆ. ಒಟ್ಟು ೬೦ ಸಾವಿರ ಚದರ ಕಿಲೋಮೀಟರ್ ವ್ಯಾಪ್ತಿಯ ಪಶ್ಚಿಮಘಟ್ಟದ ಅರಣ್ಯ ತಪ್ಪಲು (ಈಗ ಅಷ್ಟು ಅರಣ್ಯ ಉಳಿದಿಲ್ಲ) ವಿಶ್ವದ ಅತ್ಯಂತ ಶ್ರೀಮಂತ ಜೀವವೈವಿಧ್ಯತೆ ಮತ್ತು ಸಸ್ಯ ಸಮೃದ್ಧತೆಯ ಭಂಡಾರ. ಇಲ್ಲಿ ಲೆಕ್ಕವಿಲ್ಲದಷ್ಟು ವೈವಿಧ್ಯಮಯ ಪ್ರಭೇದದ ಸಸ್ಯ ಸಂಕುಲವಿದೆ. ಒಂದು ಅಂದಾಜಿನ ಪ್ರಕಾರ ಸುಮಾರು ೫೦೦೦ ಕ್ಕೂ ಹೆಚ್ಚಿನ ಸಸ್ಯಗಳ ಜಾತಿ, ೧೩೯ಕ್ಕೂ ಹೆಚ್ಚಿನ ಪ್ರಭೇದದ ಸಸ್ತನಿಗಳು, ೫೦೦ಕ್ಕೂ ಅಧಿಕ ಜಾತಿಯ ಪಕ್ಷಿಗಳು, ೧೭೦ಕ್ಕೂ ಹೆಚ್ಚಿನ ವಿಧದ ಉಭಯವಾಸಿಗಳು ಇಲ್ಲಿವೆ; ಇವುಗಳ ಪೈಕಿ ಸುಮಾರು ೩೨೫ ಜೀವವೈವಿಧ್ಯಗಳು ಅತ್ಯಂತ ಅಪರೂಪದ್ದು ಮತ್ತು ಅಳಿವಿನಂಚಿನಲ್ಲಿರುವಂತಹವು ಅನ್ನುವುದು ಅಧ್ಯಯನಗಳಿಂದ ಸಾಭೀತಾಗಿದೆ. ಸಮುದ್ರ ಮಟ್ಟದಿಂದ ೧೨೦೦ ಮೀಟರ್ ಎತ್ತರವಿರುವ ಈ ಪಶ್ಚಿಮ ಘಟ್ಟಗಳು ಭಾರತದ ಒಟ್ಟು ೪೦% ನದಿಗಳ ಉಗಮಸ್ಥಾನ. ಈ ಮಾಹಿತಿ ನಮಗೆಲ್ಲರಿಗೂ ತಿಳಿದಿದೆ. ಆದರೆ ಇಂತಹ ಅದ್ಭುತವಾದ ನೆಲತಾಯಿಯ ತವರು ಪಶ್ಚಿಮಘಟ್ಟವನ್ನು ಅಭಿವೃದ್ಧಿಯ ಹೆಸರಲ್ಲಿ ನಾಶ ಮಾಡಲು ಹೊರಟಿರುವ ಸರ್ಕಾರಗಳ ಹುನ್ನಾರ ನಮ್ಮ ಜನಗಳಿಗೆ ಅಷ್ಟಾಗಿ ತಿಳಿದಿಲ್ಲ. ಈ ಲೇಖನದಲ್ಲಿ ನಾವು ತಿಳಿಸಿಕೊಡಲು ಹೊರಟಿರುವುದು ಅಭಿವೃದ್ಧಿ ಹೆಸರಿನಲ್ಲಿ ನಮ್ಮ ಪ್ರಭುತ್ವ ಅನಗತ್ಯವಾಗಿ ನಾಶ ಮಾಡಲು ಹೊರಟಿರುವ ಯೋಜನೆಗಳು ಮತ್ತದರ ವಿನಾಶಕಾರಿ ಪರಿಣಾಮಗಳ ಬಗ್ಗೆ.
೧) ಬೆಳಗಾವಿ–ಗೋವಾ ರಾಷ್ಟ್ರೀಯ ಹೆದ್ದಾರಿ (NH4 A) ಅಗಲೀಕರಣ: ಹೆದ್ದಾರಿ ಪ್ರಾಧಿಕಾರ ಅರಣ್ಯ ಮತ್ತು ಪರಿಸರ ಅನುಮತಿ ಇಲ್ಲದೆ 1 ಲಕ್ಷ ಮರಗಳು ಕಡಿಯಲಾಗಿತ್ತು. ಪರಿಸರ ಹೋರಾಟಗಾರರು ಉಚ್ಛ ನ್ಯಾಯಾಲಯದ ಮೆಟ್ಟಿಲೇರಿ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ. ಈ ರಸ್ತೆಯು ಕರ್ನಾಟಕದ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಗೋವಾ ಪಶ್ಚಿಮಘಟ್ಟ ಪ್ರದೇಶದಲ್ಲಿನ ಭಗವಾನ್ ಮಹಾವೀರ ವನ್ಯಜೀವಿ ಅಭಯಾರಣ್ಯದಲ್ಲಿ ಹಾದು ಹೋಗುತ್ತದೆ.
2) ತಿನಾಯ್ ಘಾಟ್–ಕ್ಯಾಸಲ್ ರಾಕ್– ಕರನ್ಝೋಲ್ (ಗೋವಾ) ವರೆಗೆ ಜೋಡಿ ರೈಲು ಮಾರ್ಗ: ಈ ಯೋಜನೆಗೆ ಕರ್ನಾಟಕದ ಕಾಳಿ ಹುಲಿಸಂರಕ್ಷಿತ ಅರಣ್ಯ ಮತ್ತು ಗೋವಾದ ಭಗವಾನ್ ಮಹಾವೀರ ವನ್ಯಜೀವಿ ಅಭಯಾರಣ್ಯ ಪ್ರದೇಶ ಸೇರಿ 148.84 ಹೆಕ್ಟೇರು ಅರಣ್ಯ ನಾಶವಾಗಲಿದೆ. ಯೋಜನೆ ಅನುಷ್ಠಾನವಾಗಲಿರುವ ಪ್ರದೇಶವು ಪಶ್ಚಿಮಘಟ್ಟದ ಮತ್ತು ಪ್ರಪಂಚದ ಅಪರೂಪದ ಜೀವವೈವಿಧ್ಯ ತಾಣವಾಗಿದೆ. ಹಾಲಿ ಪ್ರಕರಣ ಸಹ ನ್ಯಾಯಾಲಯದಲ್ಲಿ ಮುಂದಿದೆ.
3) ಗೋವಾ–ತಮ್ನರ್ (ಛತ್ತೀಸ್‌ಗಢ) ವಿದ್ಯುತ್ ಪ್ರಸರಣಾ ಮಾರ್ಗ: ಈ ವಿದ್ಯುತ್ ಪ್ರಸರಣಾ ಮಾರ್ಗವು ಛತ್ತೀಸಗಡದದಿಂದ ಗೋವಾಕ್ಕೆ ಹೋಗುವ ಮಾರ್ಗದಲ್ಲಿ ಕರ್ನಾಟಕದ ಪಶ್ಚಿಮಘಟ್ಟ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಉತ್ತರ ಕನ್ನಡದ ಪಶ್ಚಿಮಘಟ್ಟಗಳಲ್ಲಿ ಹಾದು ಹೋಗುತ್ತದೆ. 177 ಹೆಕ್ಟೇರು ದಟ್ಟವಾದ ಅರಣ್ಯ ಪ್ರದೇಶವು ಕರ್ನಾಟಕದ ಪಶ್ಚಿಮಘಟ್ಟದಲ್ಲಿ ನಾಶವಾಗಲಿದೆ. ಗೋವಾ ಪ್ರಾಂತ್ಯದಲ್ಲಿ ಈಗಾಗಲೇ ಲಕ್ಷಾಂತರ ಮರಗಳನ್ನು ಪರಿಸರ ಇಲಾಖೆಯ ಅನುಮತಿ ಇಲ್ಲದೆ ಕಡಿಯಲಾಗಿದೆ. ಈ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೇ, ಬಹಳ ಗೌಪ್ಯವಾಗಿ ಸರ್ಕಾರ ಕೆಲವು ಬಂಡವಾಳಶಾಹಿಗಳಿಗೆ ಯೋಜನೆಗೆ ಅನುಮತಿಯನ್ನು ಕೊಡಲು ಹೊರಟಂತಿದೆ.
4) ಕೈಗಾ ಅಣು ಸ್ಥಾವರದ ಐದನೇ ಹಾಗು ಆರನೇ ಘಟಕಗಳ ವಿಸ್ತರಣೆ: ಈ ಯೋಜನೆಗೆ ಈಗಾಗಲೇ ಲಕ್ಷಾಂತರ ಮರಗಳು ಯೋಜನೆಯ ಸ್ಥಳ ಹಾಗು ವಿದ್ಯುತ್ ಪ್ರಸರಣ ಮಾರ್ಗಕ್ಕಾಗಿ ನಾಶವಾಗಿದ್ದು, ಅಣು ಸ್ಥಾವರ ವಿಕಿರಣದಿಂದಾಗಿ ಅಕ್ಕಪಕ್ಕದ ಹಳ್ಳಿಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಡಿಸೆಂಬರ್ 2018ರಲ್ಲಿ ನಡೆದ ಸಾರ್ವಜನಿಕರ ಅಹವಾಲು ಸಭೆಯಲ್ಲಿ ಅಣು ಸ್ಥಾವರ ವಿಸ್ತರಣೆಯಾಗಬಾರದೆಂದು ವಿರೋಧ ಮಾಡಿದವರ ಸಂಖ್ಯೆ ಅಧಿಕವಾಗಿತ್ತು. ಸ್ಥಳೀಯರ ತೀವ್ರ ವಿರೋಧವಿರುವ ಕಾರಣಕ್ಕೆ ಸರ್ಕಾರ ಸಧ್ಯಕ್ಕೆ ಮೌನವಾಗಿದೆ. ಆದರೆ ಮುಂದಿನ ನಡೆಯ ಬಗ್ಗೆ ಸರ್ಕಾರ ಸ್ಥಳೀಯರಿಗೆ ಮುಚ್ಚಿಡುತ್ತಿದ್ದಾರೆ. ಇಂತಹ ನಡೆಯಿಂದ ಸ್ಥಳೀಯರಿಗೆ ಸರ್ಕಾರದ ಮೇಲೆ ಸಂಶಯ ಬರುತ್ತಿದೆ.
೫) ಶಿರಸಿ– ಕುಮಟಾ ಹೆದ್ದಾರಿ (NH766 E): ಅತ್ಯಂತ ಕಡಿಮೆ ದಟ್ಟಣೆ ವಾಹನಗಳು ಸಂಚರಿಸುವ ಶಿರಸಿ ಕುಮಟಾ ರಸ್ತೆಯನ್ನು ಅನಾವಶ್ಯಕ ಹೆದ್ದಾರಿಗೆ ಮೇಲ್ದರ್ಜೆಗೇರಿಸಿ, 50,000 ಬಲಿತ ಪಾರಂಪಾರಿಕ ಮರಗಳನ್ನು ಕಡಿಯಲಾಗುತ್ತಿದೆ. ಹಾಲಿ ಇರುವ 5 ರಿಂದ 6 ಮೀಟರ್ ಅಗಲದ ಗುಣಮಟ್ಟದ ರಸ್ತೆಯನ್ನು ದುರಸ್ತಿ ಮಾಡಿದ್ದರೆ, ಅತ್ತ ಪರಿಸರವೂ ಉಳಿದು ಸಂಚಾರಕ್ಕೆ ಉತ್ತಮ ರಸ್ತೆಯು ಲಭ್ಯವಾಗುತ್ತಿತ್ತು. ಕುಮಟಾ ಹತ್ತಿರ ಯಾವೊದೋ ಬಂಡವಾಳ ಶಾಹಿಗಳು ಬಂದರು ಸ್ಥಾಪನೆ ಮಾಡುತ್ತಿರುವ ಕಾರಣ ಈ ರಸ್ತೆಯನ್ನು ಪರಿಸರ ಇಲಾಖೆಯ ಅನುಮತಿ ಪಡೆಯದೇ 14 ಮೀಟರ್ ಅಗಲ ಮಾಡಲಾಗುತ್ತಿದೆ. ಈ ರಸ್ತೆಯು ಶರಾವತಿ ಸಿಂಹಬಾಲದ ಸಿಂಗಳೀಕ ಅಭಯಾರಣ್ಯದ ಪರಿಸರಸೂಕ್ಷ್ಮ ಪ್ರದೇಶದಲ್ಲಿ ಹಾದು ಹೋಗುತ್ತದೆ.
6) ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗ ಯೋಜನೆ: ಈ ಯೋಜನೆಗೆ ಅನುಷ್ಠಾನವಾದರೆ 700 ಹೆಕ್ಟೇರು ದಟ್ಟ ಅರಣ್ಯ ಉತ್ತರ ಕನ್ನಡದ ಪಶ್ಚಿಮಘಟ್ಟದಲ್ಲಿ ನಾಶವಾಗಲಿದೆ. ರಾಜ್ಯ ವನ್ಯಜೀವಿ ಮಂಡಳಿ ಒಪ್ಪಿಗೆ ನೀಡದಿದ್ದರೂ, ಬಂಡವಾಳಶಾಹಿಗಳು ಪರಿಸರ ಇಲಾಖೆಯಿಂದ ಅನುಮತಿ ಪಡೆಯಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ.
7 ) ಶರಾವತಿ ಸಿಂಹಬಾಲದ ಸಿಂಗಳೀಕ ವನ್ಯಜೀವಿ ಅಭಯಾರಣ್ಯದಲ್ಲಿ 2000 ಮೆ.ವಾ. ಅಂತರ್ಗತ ಜಲವಿದ್ಯುತ್ ಯೋಜನೆ (Pumped storage project): ಶರಾವತಿ ಸಿಂಗಳೀಕ ಅಭಯಾರಣ್ಯದ ಅತಿಸೂಕ್ಷ್ಮ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಈ ಯೋಜನೆಗೆ ಸುಮಾರು 800 ಹೆಕ್ಟೇರು ಅಪರೂಪದ ಅರಣ್ಯ ನಾಶವಾಗಲಿದೆ. ದುರದೃಷ್ಟಕರವೆಂದರೆ ಕರ್ನಾಟಕ ವಿದ್ಯುತ್ ನಿಗಮವು ಸಿಂಹಬಾಲದ ಸಿಂಗಳೀಕ ವನ್ಯಜೀವಿ ಅಭಯಾರಣ್ಯದ ಅತಿಸೂಕ್ಷ್ಮ ಪ್ರದೇಶದ 800 ಹೆಕ್ಟೇರ್ ಭೂಮಿಯನ್ನು ಯೋಜನೆ ಅನುಷ್ಠಾನಗೊಳಿಸಲು ಅನುಮತಿ ಕೇಳುತ್ತಿದ್ದಾರೆ. ನಿಯಮ ಬಾಹಿರವಾಗಿ ಕಳೆದ ಮಳೆಗಾಲದಲ್ಲಿ ಸದರಿ ಪ್ರದೇಶದಲ್ಲಿ ಬೋರ್ ಹೋಲ್ ಕೊರೆದಿದ್ದು, ಅರಣ್ಯ ಇಲಾಖೆಯ ಕಾನೂನುಗಳನ್ನು ಗಾಳಿಗೆ ತೂರಿ ಮಣ್ಣು ಪರೀಕ್ಷೆ ಮಾಡಲಾಗಿದೆ. ಇದನ್ನು ಪ್ರಶ್ನಿಸಿ ಪರಿಸರ ಹೋರಾಟಗಾರರು ಕರ್ನಾಟಕ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿ ಸದ್ಯಕ್ಕೆ ತಡೆಯಾಜ್ಞೆ ತಂದಿದ್ದಾರೆ. ಅರಣ್ಯ ಕಾಯಿದೆ ತಿದ್ದುಪಡಿಯಾದರೆ ಅರಣ್ಯ ಪ್ರದೇಶದ ಪಕ್ಕದಲ್ಲಿ ಬೋರ್ ಹೋಲ್ ಕೊರೆಯಲು ಅವಕಾಶ ಸಿಗಲಿದೆ. ಇದರಿಂದ ಮತ್ತೆ ಈ ಯೋಜನೆ ಪ್ರಾರಂಭಿಸಲು ಕರ್ನಾಟಕ ವಿದ್ಯುತ್ ನಿಗಮವು ಕೈ ಹಾಕಬಹುದು.
8 ) ಶರಾವತಿ ಕಣಿವೆಯಲ್ಲಿ ಸರ್ವ ಋತು ಜಲಪಾತ ಮತ್ತು 5 ಸ್ಟಾರ್ ಹೋಟೆಲ್ ಇತ್ಯಾದಿ ಯೋಜನೆಗಳು: ವಿಶ್ವ ವಿಖ್ಯಾತ ಜೋಗ ಜಲಪಾತದ ಆವರಣದಲ್ಲಿ 5 ಸ್ಟಾರ್ ಹೋಟೆಲ್, ಸರ್ವ ಋತು ಜಲಪಾತ, ರಾತ್ರಿಯಲ್ಲಿ ಪ್ರಖರ ದೀಪದ ವ್ಯವಸ್ಥೆ; ಕೇಬಲ್ ಕಾರು, ಜಿಪ್ ಲೈನ್ (ಈಗಾಗಲೇ ಅಕ್ರಮವಾಗಿ ನಿರ್ಮಿಸಲಾಗಿದೆ); ವಾಹನ ನಿಲುಗಡೆ ವ್ಯವಸ್ಥೆ ಇತ್ಯಾದಿಗಳ ಅಭಿವೃದ್ದಿ ಯೋಜನೆಗಳಿಗೆ ಸರ್ಕಾರ ಈಗಾಗಲೇ ಮಂಜೂರಾತಿ ನೀಡಿದೆ. 2020ರ ಮಳೆಗಾಲದಲ್ಲಿ ಜೋಗದ ಬ್ರಿಟೀಷ್ ಬಂಗಲೆಯ ಹಿಂಭಾಗದಲ್ಲಿ ಗುಡ್ಡ ಕುಸಿದಿದ್ದು; ಈ ಯೋಜನೆಗಳು ಜಾರಿಯಾದಲ್ಲಿ ಮೂಲ ಜಲಪಾತವೇ ಕುಸಿದು ಬೀಳುವ ಅಪಾಯವಿದೆ. ಅಲ್ಲದೇ ಜೋಗದ ಕಣಿವೆಯಲ್ಲಿ ಅಪರೂಪದ ಪಕ್ಷಿ ಮತ್ತು ಪ್ರಾಣಿ ಪ್ರಬೇಧಗಳಿವೆ. ಪಶ್ಚಿಮಘಟ್ಟಗಳಲ್ಲೆ ಇಂತಹ ಇನ್ನೊಂದು ಕಣಿವೆ ಕಂಡುಬರುವುದಿಲ್ಲ. ಈ ಯೋಜನೆಗಳು ಜಾರಿಯಾದಲ್ಲಿ ನೈಸರ್ಗಿಕ ಜೋಗ ಇತಿಹಾಸ ಸೇರಲಿದೆ.
9 ) ಸಾಗರ-ಸಿಗಂದೂರು-ಕೊಲ್ಲೂರುರಸ್ತೆ (NH369 E) ಅಗಲೀಕರಣ: ಶರಾವತಿ ಹಿನ್ನೀರಿನ ಪ್ರದೇಶವಾಗಿರುವ ಕರೂರು ದ್ವೀಪ ಹೋಬಳಿಯ ಸಾರ್ವಜನಿಕರಿಗೆ ಹಿನ್ನೀರು ದಾಟಲು ಸೇತುವೆಯ ಅಗತ್ಯವಿತ್ತು. ಬಹಳ ಹಿಂದಿನ ಬೇಡಿಕೆಯನ್ನು ಈಡೇರಿಸುವ ಹೊತ್ತಿನಲ್ಲಿ, ಈ ಭಾಗದಲ್ಲಿ ಅತಿ ಹೆಚ್ಚು ವಾಹನ ದಟ್ಟಣೆ ಇದೆ; ಅಂದರೆ ಸುಮಾರು 4500 ವಾಹನಗಳು ಪ್ರತಿನಿತ್ಯ ತಿರುಗಾಡುತ್ತವೆ ಎಂಬ ಸುಳ್ಳು ಅಂಕಿ ಅಂಶವನ್ನು ಸೃಷ್ಟಿಸಿ, ಸದರಿ ರಸ್ತೆಯನ್ನು ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲಾಯಿತು. ಪ್ರಸ್ತಾವಿತ ಸದರಿ ಹೆದ್ದಾರಿಯು ಶರಾವತಿ ಸಿಂಹಬಾಲದ ಸಿಂಗಳೀಕ ಸಂರಕ್ಷಿತ ಅಭಯಾರಣ್ಯ ಮತ್ತು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದಲ್ಲಿ ಹಾದು ಹೋಗಲಿದೆ. ಹಾಗೂ ಅಸಂಖ್ಯಾತ ಮರಗಳು, ಜೀವಿವೈವಿಧ್ಯ ನಾಶವಾಗಲಿದೆ.
10) ಶಿಕಾರಿಪುರ–ಹೊಸನಗರ-ನಗರ-ನಿಟ್ಟೂರು–ಬೈಂದೂರು ಮಾರ್ಗವಾಗಿ ಸಾಗುವ (NH766C) ಅಗಲೀಕರಣ: ಅತ್ಯಂತ ಕಡಿಮೆ ವಾಹನ ದಟ್ಟಣೆಯಿರುವ ಈ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸುವುದರಿಂದಾಗಿ ಸಾರ್ವಜನಿಕರಿಗೆ ಹೆಚ್ಚಿನ ಉಪಯೋಗವೇನೂ ಇರುವುದಿಲ್ಲ. ಕೆಲವೇ ಕಾರ್ಪೋರೇಟ್ ಹಿತಾಸಕ್ತಿಗಳ ಲಾಭಕ್ಕಾಗಿ ಈ ಮಟ್ಟದ ಅರಣ್ಯ ನಾಶ ಮಾಡಿ; ಹೆದ್ದಾರಿ ನಿರ್ಮಿಸುವುದರಿಂದ ಅಪರಿಮಿತ ಪ್ರಮಾಣದ ಮರಗಳ ಹನನವಾಗಲಿದೆ. ಯೋಜನೆ ಅನುಷ್ಠಾನವಾದರೆ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದಲ್ಲಿ ಲಕ್ಷಾಂತರ ಮರಗಳು ನಾಶವಾಗುತ್ತವೆ.
11) ಆಗುಂಬೆ ಮತ್ತು ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ಹಾದು ಹೋಗುವ ತೀರ್ಥಹಳ್ಳಿ– ಮಲ್ಪೆ 2 ಪಥಗಳ ರಾಷ್ಟ್ರೀಯ ಹೆದ್ದಾರಿ (NH169A) ಅಗಲೀಕರಣ:
ಯುನೆಸ್ಕೋ (UNESCO) ಆಗುಂಬೆಯನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಣೆ ಮಾಡಿದೆ. ಆದ್ದರಿಂದ ಪಾರಂಪಾರಿಕ ತಾಣದಲ್ಲಿ ಮರಗಳನ್ನು ಕಡಿದು ರಸ್ತೆ ಅಗಲೀಕರಣ ಮಾಡುವುದು ನಿಸರ್ಗದ ದೃಷ್ಟಿಯಿಂದ ಕ್ಷೇಮವಲ್ಲ. ಆದರೆ ಈ ರಸ್ತೆ ಅಗಲೀಕರಣಕ್ಕೆ ಈಗಾಗಲೇ 350 ಕೋಟಿ ಬಿಡುಗಡೆಯಾಗಿದೆ. ಈ ರಸ್ತೆಯನ್ನು ದ್ವಿಪಥ ಮಾಡುವಷ್ಟು ವಾಹನ ದಟ್ಟಣೆ ಇಲ್ಲಿ ಇಲ್ಲ. ಈಗ್ಗೆ 3 ವರ್ಷದ ಹಿಂದೆ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಈ ಯೋಜನೆ ಅನುಷ್ಠಾನವಾದರೆ ಲಕ್ಷಾಂತರ ಮರಗಳು ಸೋಮೇಶ್ವರ ವನ್ಯಜೀವಿ ಅಭಯಾರಣ್ಯದಲ್ಲಿ ನಾಶವಾಗಲಿವೆ.
12) ಶಿವಮೊಗ್ಗ-ತೀರ್ಥಹಳ್ಳಿ-ಶೃಂಗೇರಿ-ಕಾರ್ಕಳ-ಮಂಗಳೂರು ರಾಷ್ಟ್ರೀಯ ಹೆದ್ದಾರಿ (NH169) ಅಗಲೀಕರಣ:
ಈ ರಸ್ತೆಯು ಶೆಟ್ಟಿಹಳ್ಳಿ ಅಭಯಾರಣ್ಯ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮೇಲೆ ಹಾದು ಹೋಗುತ್ತದೆ. ರಕ್ಷಿತಾ ಅರಣ್ಯ ಭಾಗಗಳಲ್ಲಿ ಪರಿಸರ ಅನುಮತಿ ಪಡೆಯದೇ ಈಗಾಗಲೇ ಸಾವಿರಾರು ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ. ಶೆಟ್ಟಿಹಳ್ಳಿ ವನ್ಯಜೀವಿ ಪ್ರದೇಶ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಅಗಲೀಕರಣಕ್ಕೆ ಅನುಮತಿ ನೀಡಿದರೆ ಲಕ್ಷಾಂತರ ಮರಗಳು ನಾಶವಾಗುತ್ತವೆ. ಶಿವಮೊಗ್ಗದಿಂದ ಕಾರ್ಕಳದವರೆಗೆ ಕಡಿಮೆ ವಾಹನಗಳು ಓಡಾಡುವುದರಿಂದ ಈ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಮಾಡುವುದು ಅನಾವಶ್ಯಕವಾಗಿದೆ. ಹೆದ್ದಾರಿ ಪ್ರಾಧಿಕಾರವು ವಾಹನ ಗಣತಿಯ ತಪ್ಪು ಮಾಹಿತಿ ನೀಡಿದ್ದು ಅಕ್ಷಮ್ಯ.
13) ಬೆಂಗಳೂರು–ಮಂಗಳೂರು ಹೆದ್ದಾರಿ (NH75) ಅಗಲೀಕರಣ:
ಈ ಯೋಜನೆಗೆ ಬೆಂಗಳೂರು ಹಾಸನ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಗಲೀಕರಣಕ್ಕೆ 50,000ಕ್ಕೂ ಹೆಚ್ಚು ಮರಗಳನ್ನು ಈಗಾಗಲೇ ಕಡಿಯಲಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ (ಪಶ್ಚಿಮಘಟ್ಟದ ಹೃದಯ ಭಾಗದಲ್ಲಿ) ಭಾಗದಲ್ಲಿ ಈಗ ಅಗಲೀಕರಣ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಯೋಜನೆ ಮುಗಿಯುವಷ್ಟರಲ್ಲಿ ಲಕ್ಷಾಂತರ ಮರಗಳು ಸಕಲೇಶಪುರದಿಂದ ಗುಂಡ್ಯದವರೆಗೆ ನಾಶವಾಗುತ್ತವೆ. ಸಕಲೇಶಪುರ ಭಾಗದ ರಸ್ತೆಯ ಬಹುತೇಕ ಪ್ರದೇಶ ಆನೆ ಪಥವಾಗಿದೆ. ರಸ್ತೆಯಾಗುತ್ತಿರುವ ಪ್ರದೇಶದಲ್ಲೇ ಅವೈಜ್ಞಾನಿಕ ಎತ್ತಿನಹೊಳೆ ಯೋಜನೆ ನಡೆಯುತ್ತಿದ್ದು, ಆನೆಗಳು ಶಾಶ್ವತವಾಗಿ ಆವಾಸಸ್ಥಾನ ಕಳೆದುಕೊಳ್ಳಲಿವೆ. ಇದರಿಂದ ಮಾನವ–ಆನೆ ಸಂಘರ್ಷ ಮೇರೆಮೀರಲಿದೆ.
14 ) ಕೊಡಗಿನ ಪಶ್ಚಿಮಘಟ್ಟದಲ್ಲಿ ಕಾವೇರಿ ನದಿಮೂಲ ಪ್ರದೇಶದಲ್ಲಿ ಜಾರಿಯಾಗಲಿರುವ ಯೋಜನೆಗಳು. ಎಲ್ಲ ಯೋಜನೆಗಳಿಗಾಗಿ 6 ಲಕ್ಷಕ್ಕೂ ಹೆಚ್ಚು ಬಲಿತ ಪಾರಂಪಾರಿಕ ಮರಗಳು ನಾಶವಾಗಲಿವೆ.
15) ಇನ್ನು ಭವಿಷ್ಯದ ರಸ್ತೆ ಯೋಜನೆಗಳನ್ನು ನೋಡುವುದಾದರೇ:
- ಮೈಸೂರು -ಕುಶಾಲನಗರ–ಮಡಿಕೇರಿ
- ಮೈಸೂರು-ಮಡಿಕೇರಿ-ಸಂಪಾಜೆ-ಮಂಗಳೂರು
- ತಲಶ್ಶೇರಿ (ಕೇರಳ)-ಗೋಣಿಕೊಪ್ಪ-ಮೈಸೂರು
- ಮಡಿಕೇರಿ-ವಿರಾಜಪೇಟೆ-ಕಣ್ಣೂರ್ (ಕೇರಳ)
- ಪಣತೂರ್ (ಕೇರಳ)-ಭಾಗಮಂಡಲ-ಮಡಿಕೇರಿ-ಮೈಸೂರು
16) ಭವಿಷ್ಯದಲ್ಲಿ ಪಶ್ಚಿಮಘಟ್ಟಕ್ಕೆ ಮಾರಕವಾಗಲಿರುವ ರೈಲ್ವೆ ಯೋಜನೆ ಮೈಸೂರು-ಕುಶಾಲನಗರ-ಮಡಿಕೇರಿ ಹೊಸ ರೈಲು ಮಾರ್ಗ ನಿರ್ಮಾಣ.
ಈ ಹತ್ತು ಹಲವು ಸೋ ಕಾಲ್ಡ್ ಅಭಿವೃದ್ಧಿ ಯೋಜನೆಗಳಿಂದಾಗಿ ಕೊಡಗು ಮತ್ತು ಮಡಿಕೇರಿ ಭಾಗಗಳಲ್ಲಿ ಅಪರಿಮಿತ ಪರಿಸರ ನಾಶವಾಗುವುದಲ್ಲದೇ, ಗುಡ್ಡಕುಸಿತಗಳು ಸಂಭವಿಸಲಿವೆ. ಮಾನವ ನಿರ್ಮಿತ ನೈಸರ್ಗಿಕ ವಿಕೋಪಗಳನ್ನು ತಡೆಯುವ ಸಲುವಾಗಿ ಅಲ್ಲಿನ ಪರಿಸರ ಮಿತ್ರರು ಈ ಎಲ್ಲಾ ಯೋಜನೆಗಳ ರದ್ದತಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಈ ಮೇಲಿನ ಯೋಜನೆಗಳಲ್ಲದೇ ಪಶ್ಚಿಮಘಟ್ಟಗಳ ಪತನಕ್ಕಾಗಿ ಇನ್ನೂ ಅಸಂಖ್ಯ ಯೋಜನೆಗಳು ಜಾರಿಯಾಗಲು ಕಾದು ಕುಳಿತಿವೆ. ಇದೇ ಹೊತ್ತಿನಲ್ಲಿ 6 ಲಕ್ಷ ಹೆಕ್ಟೇರ್ ಪರಿಭಾವಿತ ಅರಣ್ಯ ಪ್ರದೇಶವನ್ನು ಅರಣ್ಯ ಇಲಾಖೆಯಿಂದ ವಾಪಾಸು ಪಡೆಯುವ ಪ್ರಕ್ರಿಯೆಯನ್ನು ಸರ್ಕಾರ ಮಾಡುತ್ತಿದೆ. ಅಕ್ರಮ ಕಲ್ಲು, ಮರಳು ಗಣಿಗಾರಿಕೆಗಳು ಮಲೆನಾಡಿಗೆ ಶಾಪವಾಗಿ ಪರಿಣಮಿಸಿವೆ. ಅರಣ್ಯ ಹಕ್ಕು ಕಾಯ್ದೆಯ ವ್ಯಾಪಕ ದುರುಪಯೋಗವಾಗಿ, ನಿಜವಾದ ಫಲಾನುಭವಿಗಳು ತಮ್ಮ ಹಕ್ಕಿನಿಂದ ವಂಚಿತರಾಗಿದ್ದಾರೆ. ನದಿ ತಿರುವು ಯೋಜನೆಗಳು, ನದಿಗಳಿಗೆ ಅಡ್ಡಲಾಗಿ ಸಾವಿರಾರು ಆಣೆಕಟ್ಟುಗಳನ್ನು ಕಟ್ಟುವ ಮೂರ್ಖ ಯೋಜನೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿಲ್ಲ. ಬಯಲು ನಾಡಿಗೂ ನೀರು ನೀಡುವ ಎಲ್ಲಾ ನದಿಗಳು ಪಶ್ಚಿಮಘಟ್ಟದಲ್ಲೇ ಉಗಮವಾಗುತ್ತವೆ. ಶುದ್ಧಗಾಳಿ, ನೀರು, ಆಹಾರ ಭದ್ರತೆ ನೀಡುವುದು ಯಾವುದೇ ಆಳುವವರ ಆದ್ಯ ಕರ್ತವ್ಯವಾಗಿರುತ್ತದೆ. ಪಶ್ಚಿಮಘಟ್ಟಗಳನ್ನು ಅಭಿವೃದ್ದಿಯ ಹೆಸರಿನಲ್ಲಿ ಕಳೆದುಕೊಂಡರೆ, ಈ ಎಲ್ಲಾ ಭದ್ರತೆಗಳ ತಳಪಾಯವೇ ಕುಸಿದುಹೋಗುತ್ತದೆ. ನೀರಿಗಾಗಿ ಅಂತರ್ಜಿಲ್ಲಾ ಕಲಹಗಳು ಸಂಭವಿಸಲಿವೆ. ಮುಖ್ಯವಾಗಿ ರೈತರು ಮತ್ತು ಬಡವರು ಅಕಾಲಿಕ ಮಳೆ ಮತ್ತು ಬರದಿಂದ ಸಾಮೂಹಿಕವಾಗಿ ಸಂತ್ರಸ್ಥರಾಗಲಿದ್ದಾರೆ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿರಿಸಿಕೊಂಡು, ಮೇಲೆ ಹೇಳಿದ ಪಶ್ಚಿಮಘಟ್ಟಗಳ ಪತನದ ಹುನ್ನಾರವನ್ನು ತಡೆಯುವ ಪ್ರಯತ್ನವನ್ನು ಸಾಮೂಹಿಕವಾಗಿ ಮಾಡಬೇಕಿದೆ.
-ವಿವರ ಮಾಹಿತಿ ಮತ್ತು ವಿಸ್ಕೃತ ಲೇಖನ: ಅಖಿಲೇಶ್ ಚಿಪ್ಲಿ ಮತ್ತು ಸಹದೇವ್ ಶಿವಪುರ