ರಾಜ್ಯ ಕಾಂಗ್ರೆಸ್ ಅಧ್ಯಕ್ಷಗಾದಿಯನ್ನು ಅದ್ಧೂರಿಯಾಗಿ ಅಲಂಕರಿಸಬೇಕೆಂಬ ಡಿ.ಕೆ. ಶಿವಕುಮಾರ್ ಕನಸಿಗೆ ಕೊರೊನಾ ನೀರೆರಚಿತು. ಈಗ ಅದೇ ಕೊರೊನಾ ಕಾಂಗ್ರೆಸ್ ಕಟ್ಟಪ್ಪನನ್ನು ಹೈಕಮಾಂಡ್ ಎದುರು ಹೀರೋ ಆಗಿ ಬಿಂಬಿಸಿದೆ.
ಹೌದು..! ಸದ್ಯ ಕೊರೊನಾ ವಿಚಿತ್ರ ಪರಿಸ್ಥಿತಿಯನ್ನ ತಂದೊಡ್ಡಿದೆ. ವಿಪಕ್ಷಗಳು ಸರ್ಕಾರಗಳಿಗೆ ಶರಣಾಗಿರುವ ಸಂದಿಗ್ಧ ಸ್ಥಿತಿಯಲ್ಲಿವೆ. ಆದರೆ ಡಿ.ಕೆ.ಶಿವಕುಮಾರ್ ಹಾಗಲ್ಲ. ಪರಿಸ್ಥಿತಿ ಹೇಗೇ ಇರಲಿ, ಒಂದು ಕೈ ನೋಡೇ ಬಿಡೋಣ ಎಂದು ಅಖಾಡಕ್ಕೆ ಇಳಿಸಿದ್ದಾರೆ. ಅದೇ ರೀತಿ ಈಗಲೂ ಆಕ್ಷನ್ ಮೂಡಿನಲ್ಲಿದ್ದಾರೆ. ಡಿಕೆಶಿಯ ಈ ಆಕ್ಷನ್ ಮೂಡಿನಿಂದಾಗಿಯೇ ಈಗ ಹೈಕಮಾಂಡ್ ಮೆಚ್ಚಿ ಅಹುದಹುದು ಎಂದು ಹೇಳುತ್ತಿರುವುದು.
ಕನಕಪುರ ಬಂಡೆ ತುಳಿದ ಆ 4 ಹೆಜ್ಜೆಗಳು ಅವರು ಹೈಕಮಾಂಡಿಗೆ ಹತ್ತಿರ ಆಗುವ ರೀತಿ ಮಾಡಿವೆ.
1) ಡಿ.ಕೆ ಶಿವಕುಮಾರ್ ಅವರು ಬೇರೆ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರಂತೆ ಪರಿಸ್ಥಿತಿಯನ್ನು ದೂರುತ್ತಾ ತಮ್ಮ ಕರ್ತವ್ಯ ಮರೆಯಲಿಲ್ಲ. ಕೊರೊನಾದಂತಹ ನಿರ್ಣಾಯಕ ಪರಿಸ್ಥಿತಿಯಲ್ಲೂ ಪುಟಿದೆದ್ದು ಕೆಲಸ ಮಾಡುತ್ತಿದ್ದಾರೆ. ಆಳುವ ಸರ್ಕಾರ ಅಂಕೆ ಮೀರಿದಾಗ ಅಂಕುಶ ಹಾಕಲು ಯತ್ನಿಸುತ್ತಿದ್ದಾರೆ.
2) ಈ ಕಷ್ಟ ಕಾಲದಲ್ಲಿ ಜನರ ಬಳಿ ಹೋಗುತ್ತಿದ್ದಾರೆ ಡಿಕೆಶಿ. ತರಕಾರಿ ಬೆಳೆಯುವವರ ಜಮೀನಿಗೆ ಹೋಗಿ ತರಕಾರಿಯನ್ನು ತಾವೇ ಕೊಂಡುಕೊಳ್ಳುವ ಮೂಲಕ ಸರ್ಕಾರವೇ ಕೊಂಡುಕೊಳ್ಳುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ‘ನೀವು ಬೆಳೆದ ತರಕಾರಿಗಳನ್ನು ಸರ್ಕಾರ ತೆಗೆದುಕೊಳ್ಳದಿದ್ದರೆ ಮುಖ್ಯಮಂತ್ರಿ ಮನೆಗೆ ಕಳಿಸಿ’ ಎಂದು ಜನರನ್ನು ಸರ್ಕಾರದ ವಿರುದ್ಧ ಸಿಡಿದೇಳುವಂತೆ ಮಾಡಿದ್ದಾರೆ.
3) ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಲು ಸಾರಿಗೆ ವ್ಯವಸ್ಥೆ ಮಾಡುವುದರಲ್ಲಿ ಸರ್ಕಾರ ಎಡವಿತ್ತು. ಮೊದಲು ಪ್ರಯಾಣಿಕರಿಂದ ಹಣ ಪಡೆದ ಸರ್ಕಾರದ ವಿರುದ್ಧ ಕಾಂಗ್ರೆಸ್ ಗುಡುಗಿತ್ತು. ಬಳಿಕ ಉಚಿತ ಸಾರಿಗೆ ವ್ಯವಸ್ಥೆ ಮಾಡುವಂತೆ ಡಿಕೆಶಿ ಆಗ್ರಹಿಸಿದರು. ಅಲ್ಲದೆ ಸೀದಾ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಗೆ ಹೋದ ಡಿಕೆಶಿ ಊರಿಗೋಗಲು ಪರದಾಡುತ್ತಿದ್ದವರ ಪಕ್ಕದಲ್ಲಿ ಕುಳಿತು ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಇವರೆಲ್ಲರನ್ನೂ ಕೂಡಲೇ ಊರಿಗೆ ಕಳಿಸುವ ವ್ಯವಸ್ಥೆ ಮಾಡಿ ಎಂದು ಬರೊಬ್ಬರಿ ಒಂದು ಕೋಟಿ ರೂಪಾಯಿ ಚೆಕ್ ಕೊಡಲು ಮುಂದಾದರು. ಡಿಕೆಶಿ ಚೆಕ್ ಕೊಡಲು ಮುಂದಾಗಿದ್ದೇ ತಡ ತಡಬಡಾಯಿಸಿ ಹೋದ ಸರ್ಕಾರ ಎದ್ದು ಬಿದ್ದೆನೋ ಎಂದು ಬಸ್ಸು-ರೈಲುಗಳನ್ನು ಮರುವ್ಯವಸ್ಥೆ ಮಾಡಿತು.
4) ಸರ್ಕಾರದ ದುಡ್ಡಿನಲ್ಲಿ ಬಡವರಿಗೆ ಹಂಚುವ ಪಡಿತರ ಧಾನ್ಯಗಳ ಮೇಲೆ ಬಿಜೆಪಿ ನಾಯಕರು ತಮ್ಮ ಫೋಟೋ ಹಾಕಿಕೊಂಡಿದ್ದರು. ಗೋಡನ್ ಗಳ ಮೇಲೆ ದಾಳಿ ಮಾಡಿದ ಡಿಕೆ ಬ್ರದರ್ಸ್ ಬಿಜೆಪಿಯ ಬಣ್ಣವನ್ನು ಬಟಾ ಬಯಲು ಮಾಡಿ ಬಿಟ್ಟಿದ್ದರು.
ಹೀಗೆ ಪ್ರತಿ ಹೆಜ್ಜೆಯಲ್ಲೂ ಸರ್ಕಾರದ ಎಡವಟ್ಟುಗಳನ್ನು ಕಾಂಗ್ರೆಸ್ ಕಟ್ಟಪ್ಪ ಡಿ.ಕೆ ಶಿವಕುಮಾರ್ ಅವರು, ಟೀಕಿಸುತ್ತಾ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿದ್ದರು. ಹೀಗಾಗಿ ಡಿಕೆಶಿಯ ಈ ಸ್ಪೀಡ್ ನೋಡಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಖುಷಿಯಾಗಿದ್ದಾರಂತೆ.








