ನವದೆಹಲಿ : ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಹೊಡೆತಕ್ಕೆ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಈ ಕಾರಣವನ್ನೇ ಮುಂದಿಟ್ಟುಕೊಂಡು ಅನೇಕ ಕಂಪನಿಗಳು ತಮ್ಮ ಕಾರ್ಮಿಕರನ್ನು ವಜಾಗೊಳಿಸುತ್ತಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಸಿಲುಕುತ್ತಿರುವ ವ್ಯಕ್ತಿಗಳಿಗೆ ಅಟಲ್ ಬೀಮಿತ್ ಕಲ್ಯಾಣ ಯೋಜನೆ ಸಹಾಯವಾಗಲಿದೆ. ಈ ಯೋಜನೆಯಡಿ ಕೆಲಸ ಕಳೆದುಕೊಂಡ ವ್ಯಕ್ತಿಗೆ ಎರಡು ವರ್ಷಗಳ ವರೆಗೆ ಆರ್ಥಿಕ ಸಹಾಯ ಮಾಡಲಾಗುವುದು.
ಈ ಯೋಜನೆಯ ಅಡಿಯಲ್ಲಿ ನೌಕರಿ ಕಳೆದುಕೊಂಡ ನಂತರ ಸಂಬಂಧಿತ ವ್ಯಕ್ತಿಗೆ ಸರಕಾರ ಎರಡು ವರ್ಷಗಳವರೆಗೆ ಆರ್ಥಿಕ ಸಹಾಯ ಮಾಡುತ್ತದೆ. ಈ ಸಹಾಯ ಪ್ರತಿ ತಿಂಗಳು ಮಾಡಲಾಗುತ್ತದೆ. ನಿರುದ್ಯೋಗ ವ್ಯಕ್ತಿಗೆ ಈ ಲಾಭ ಆತನ ಹಿಂದಿನ 90 ದಿನಗಳ ಸರಾಸರಿ ಸಂಬಳದ 25 ಪ್ರತಿಶತದ ವರೆಗೆ ಕೊಡಲಾಗುವುದು. ಈ ಲಾಭ ಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ದೊರೆಯುವದು, ESIC ಇನ್ಸ್ಯೂರನ್ಸ್ ಹೊಂದಿದವರಾಗಿರಬೇಕು, ಜೊತೆಗೆ 24 ತಿಂಗಳು ಸೇವೆ ಸಲ್ಲಿಸಿದವರಾಗಿರಬೇಕು. ಇನ್ನು ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಗೆ ಜೋಡಣೆಯಾಗಿರಬೇಕು.
ಒಂದು ವೇಳೆ ನೀವೂ ಸಹ ಈ ಲಾಭ ಪಡೆದುಕೊಳ್ಳಬೇಕಾದರೆ ಮೊದಲು ESIC ವೆಬ್ ಸೈಟಿಗೆ ಹೋಗಿ ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆಯ ಸಲುವಾಗಿ ರಜಿಸ್ಟ್ರೇಷನ್ ಮಾಡಬೇಕಾಗುತ್ತದೆ.