ಕೊಹ್ಲಿ – ರೋಹಿತ್ ಮಧ್ಯೆ ಕೋಲ್ಡ್ ವಾರ್ ಕಾರಣವೇನು..?
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟೀಮ್ ಇಂಡಿಯಾದ ಅದ್ಭುತ ಆಟಗಾರರು. ವಿರಾಟ್ ಕೊಹ್ಲಿ ಆಕ್ರಮಣಕಾರಿ ಪ್ರವೃತ್ತಿಯಿಂದ ಸುದ್ದಿಯಾದ್ರೆ, ರೋಹಿತ್ ಶರ್ಮಾ ಕೂಲ್ ಆಗಿದ್ದುಕೊಂಡೇ ಸುದ್ದಿಯಾಗುತ್ತಾರೆ. ಎದುರಾಳಿ ಮೇಲೆ ಗುಡುಗು ಸಿಡಿಲಿನಂತೆ ಮುಗಿಬೀಳುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವಿನ ಸಂಬಂಧ ಕೂಡ ಅಷ್ಟಕ್ಕಷ್ಟೇ. ಇದಕ್ಕೆ ಕಾರಣ ಹಿರಿತನ.
ಹೌದು..! ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗಿಂತ ಮುನ್ನವೇ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟು ಹೆಸರು ಮಾಡಿದ್ದರು. 2007ರ ಟಿ 20 ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆದು ಸಿಕ್ಕ ಅವಕಾಶಗಳಲ್ಲಿ ಮಿಂಚು ಹರಿಸಿದ್ದರು. ರೋಹಿತ್ ಶರ್ಮಾ ಟೀಂ ಇಂಡಿಯಾದ ಬ್ಯಾಟಿಂಗ್ ಭವಿಷ್ಯ ಎಂದು ಹೇಳಲಾಗುತ್ತಿತ್ತು.
ಆದ್ರೆ ವಿರಾಟ್ ಆಗಮನದಿಂದ ರೋಹಿತ್ ಸೈಡ್ ಲೈನ್ ಆದ್ರು. ಬ್ಯಾಡ್ ಫಾರ್ಮ್ ಗೆ ಸಿಕ್ಕ ರೋಹಿತ್ ತಂಡದಲ್ಲಿ ಸ್ಥಾನಪಡೆಯಲು ಪರದಾಡಿದ್ರು. ರೋಹಿತ್ ಸ್ಟ್ರಗಲ್ ಮಾಡುವಾಗಲೇ ವಿರಾಟ್ ಕ್ರಿಕೆಟ್ ಜಗತ್ತಿನಲ್ಲಿ ಕಿಂಗ್ ಆಗಿ ಮೆರೆಯಲು ಶುರು ಮಾಡಿದ್ರು. ಜೊತೆಗೆ ರೋಹಿತ್ ಗಿಂತ ಹೆಚ್ಚು ವಿರಾಟ್ ಕೊಹ್ಲಿಗೆ ಅವಕಾಶಗಳು ಕೂಡ ಜಾಸ್ತಿ ಸಿಕ್ಕಿತ್ತು.
ಧೋನಿ ನಾಯಕತ್ವದಿಂದ ಕೆಳಗಿಳಿದಾಗ ವಿರಾಟ್ ಕೊಹ್ಲಿಗೆ ನಾಯಕತ್ವ ಒಲಿದು ಬಂತು. ಆದ್ರೆ ರೋಹಿತ್ ಶರ್ಮಾಗೆ ಅಂತಹ ಅವಕಾಶ ಸಿಗಲಿಲ್ಲ. ಇನ್ನೊಂದೆಡೆ ರೋಹಿತ್ ಶರ್ಮಾ ಐಪಿಎಲ್ ನಲ್ಲಿ ಮುಂಬೈ ತಂಡದ ನಾಯಕನಾಗಿ ಐದು ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದರು. ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ.
ಹೀಗಿದ್ದರೂ ರೋಹಿತ್ ಗೆ ಬಿಸಿಸಿಐ ಬಿಗ್ ಬಾಸ್ ಗಳು ಮಣೆ ಹಾಕಲಿಲ್ಲ. ಮುಖ್ಯವಾಗಿ 2019ರ ವಿಶ್ವಕಪ್ ನಂತರ ರೋಹಿತ್ ಮತ್ತು ವಿರಾಟ್ ಕೊಹ್ಲಿ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಮಾತುಗಳು ಜೋರಾಗಿ ಕೇಳಿಬಂದಿದ್ದವು. ಆದರೂ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕನಾಗಿ ಯಶಸ್ವಿನ ಅಲೆಯಲ್ಲಿ ತೇಲಾಡುತ್ತಿದ್ದಾರೆ.
ಅದೇ ರೀತಿ ಕೆಲವೊಂದು ಸರಣಿಗಳಲ್ಲಿ ರೋಹಿತ್ ಶರ್ಮಾ ನಾಯಕನಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಿ ಯಶ ಸಾಧಿಸಿದ್ದರು. ಆದ್ರೆ ಕೆಲ ದಿನಗಳಿಂದ ಈ ಇಬ್ಬರ ಮಧ್ಯೆ ಎಲ್ಲವೂ ಓಕೆ ಆಗಿದ್ದು, ಯಾವುದೇ ಮನಸ್ತಾಪ ಇಲ್ಲ ಎಂದು ಹೇಳಲಾಗುತ್ತಿತ್ತು.
ಇದೀಗ ವಿರಾಟ್ ಕೊಹ್ಲಿ ಅವರನ್ನು ಏಕದಿನ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಆ ಮೂಲಕ ಸೀಮಿತ ಒವರ್ ಗಳ ಕ್ರಿಕೆಟ್ ನಲ್ಲಿ ನಾಯಕನಾಗಿ ವಿರಾಟ್ ಯುಗ ಅಂತ್ಯವಾಗಿದೆ.
ಹಿಟ್ ಮ್ಯಾನ್ ರೋಹಿತ್ ಶರ್ಮಾ ಟಿ 20 , ಏಕದಿನ ಕ್ರಿಕೆಟ್ ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ಇದು ಮತ್ತೆ ತಂಡದಲ್ಲಿ ಮುಸುಕಿನ ಗುದ್ದಾಟಕ್ಕೆ ನಾಂದಿಯಾಡಿದೆ ಎಂದು ಹೇಳಲಾಗುತ್ತಿದೆ.