ಬೆಳಗಾವಿ : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ವ್ಯಾಪಿಸುತ್ತಿದ್ದು ಇಂದು ಬೆಳಗ್ಗೆ 22 ಮಂದಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಇದರಲ್ಲಿ ಅಥಣಿ ತಾಲೂಕಿನ ಪ್ರಥಮ ಕೊವಿಡ್೧೯ ಪ್ರಕರಣ ದಾಖಲಾಗಿದೆ. ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಯುವಕನಿಗೆ ಕೊರೊನಾ ವೈರಸ್ ದೃಢ ಪಟ್ಟಿದೆ. ಆದರೆ ಯುವಕ ಅಥಣಿ ತಾಲೂಕಿನಲ್ಲಿ ಇಲ್ಲ, ರಾಜಸ್ತಾನದ ಅಜಮೀರ್ ಪ್ರವಾಸ ಮಾಡಿದ್ದ ಎಂದು ತಿಳಿದುಬಂದಿದೆ.
ಅಜ್ಮೀರ್ ಪ್ರವಾಸ ಮುಗಿಸಿ ಬೆಳಗಾವಿ ಗಡಿ ಪ್ರವೇಶ ಮಾಡಿದ ವೇಳೆ ನಿಪ್ಪಾಣಿಯಲ್ಲಿ ಪೊಲೀಸರು ಇವರನ್ನು ತಡೆದು ಹೋಮ್ ಕ್ವಾರಂಟೈನ್ ಮಾಡಲಾಗಿತ್ತು . ಈ ಯುವಕ ಅಥಣಿ ತಾಲೂಕಿನ ಕೊಕಟನೂರ ಗ್ರಾಮದವನು ಎಂದು ತಿಳಿದು ಬಂದಿದೆ. ಅಥಣಿಯಲ್ಲಿ ಯಾವುದೇ ಕೊವಿಡ್೧೯ ಪ್ರಕರಣಗಳು ದಾಖಲೆ ಆಗಿಲ್ಲ. ಜನಸಾಮಾನ್ಯರು ಅಥಣಿ ಯುವಕ ಎಂದ ಕ್ಷಣ ತಾಲೂಕಿನ ಜನತೆಯನ್ನು ಒಂದು ಕ್ಷಣ ಬೆಚ್ಚಿ ಬೀಳಿಸಿತ್ತು.
ಅಥಣಿ ತಾಲೂಕಿನ ವೈದ್ಯಾಧಿಕಾರಿ ಮುತ್ತಣ್ಣ ಕೋಪ್ಪದ ಈ ವಿಚಾರವಾಗಿ ದೂರವಾಣಿ ಮೂಲಕ ಮಾತನಾಡಿ, ಸೋಂಕಿತ ಅಥಣಿ ತಾಲೂಕಿನ ಯುವಕ. ಆದರೆ ಅಥಣಿಗೂ ಈ ಪ್ರಕರಣಕ್ಕೂ ತಳುಕು ಇಲ್ಲ. ಈ ಯುವಕನನ್ನು ನಿಪ್ಪಾಣಿ ಯಲ್ಲಿ ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು, ಇವತ್ತು ವೈರಸ್ ದೃಢಪಟ್ಟಿದೆ. ಇದರಿಂದ ಅಥಣಿಯ ಜನತೆ ಯಾರೂ ಆತಂಕ ಪಡುವ ಅಗತ್ಯವಿಲ್ಲ, ಎಂದು ಪ್ರತಿಕ್ರಿಯಿಸಿದರು.








