ನವದೆಹಲಿ : ಕೊರೊನಾ ಸೋಂಕು ಹರಡುವುದನ್ನ ತಡೆಯಲು ಜಾರಿಗೊಳಿಸಲಾಗಿರುವ ಲಾಕ್ ಡೌನ್ ನಿಂದಾಗಿ ವಲಸೆ ಕಾರ್ಮಿಕರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಇದರ ಮಧ್ಯೆ ಅನೇಕ ರಾಜ್ಯಗಳು ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿಗೆ ಮುಂದಾಗುತ್ತಿವೆ. ಇದರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದು, ಕೋವಿಡ್ ಹೆಸರಲ್ಲಿ ಕಾರ್ಮಿಕರ ಶೋಷಣೆಯಾಗಬಾರದು ಎಂದು ಎಚ್ಚರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವು ಕಾರ್ಮಿಕರನ್ನು ಶೋಷಣೆಯಾಗಬಾರದು. ಹಾಗೆಯೇ ಕಾರ್ಮಿಕರ ಧ್ವನಿಯನ್ನು ಮಟ್ಟ ಹಾಕಿ ಮಾನವ ಹಕ್ಕುಗಳನ್ನು ಕಸಿದುಕೊಳ್ಳಬಾರದು. ಅನೇಕ ರಾಜ್ಯಗಳು ಕಾನೂನುಗಳನ್ನು ತಿದ್ದುಪಡಿ ಮಾಡುತ್ತಿದೆ. ನಾವೆಲ್ಲರೂ ಒಗ್ಗಟ್ಟಾಗಿ ಕೊರೊನಾ ವಿರುದ್ಧ ಹೋರಾಡುತ್ತಿದ್ದೇವೆ. ಆದರೆ ಮಾನವ ಹಕ್ಕುಗಳನ್ನು ಹತ್ತಿಕ್ಕಲು, ಅಸುರಕ್ಷಿತ ಕೆಲಸದ ಸ್ಥಳಗಳಿಗೆ ಅನುಮತಿ ನೀಡುವುದು ಹಾಗೂ ಕಾರ್ಮಿಕರನ್ನು ಶೋಷಣೆ ಮಾಡುವ ವಿಚಾರಗಳಲ್ಲಿ ಯಾವುದೇ ಕಾರಣಕ್ಕೂ ರಾಜಿಗೂ ತಯಾರಿಲ್ಲ’ ಎಂದು ಹೇಳಿದ್ದಾರೆ.
ವಲಸೆ ಕಾರ್ಮಿಕರಿಗೆ ಸುರಕ್ಷಿತವಾಗಿ ಊರಿಗೆ ತಲುಪಿಸುವಲ್ಲಿ ಆಡಳಿತಾರೂಢ ಬಿಜೆಪಿ ಸರಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.








