ಓಟದ ರಾಣಿ ಪಿ ಟಿ ಉಷಾ ವಿರುದ್ಧ ವಂಚನೆ ಪ್ರಕರಣ ದಾಖಲು…
ಓಟದ ರಾಣಿ ಎಂದೆ ಖ್ಯಾತಿ ಪಡೆದ ಭಾರತದ ಅಥ್ಲೀಟ್ ಪಿ ಟಿ ಉಷಾ ವಿರುದ್ಧ ಕೇರಳ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ. ಮಾಜಿ ಅಥ್ಲೀಟ್ ಗೆಮ್ಮಾ ಜೋಸೆಫ್ ದೂರಿನ ಮೇರೆಗೆ ಕೋಝಿಕೋಡ್ ಪೊಲೀಸರು ಪಿ ಟಿ ಉಷಾ ಸೇರಿ ಆರು ಮಂದಿ ವಿರುದ್ಧ ಐಪಿಸಿ 420ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಮನೆ ನಿರ್ಮಾಣಕ್ಕೆಂದು ಇಂತಿಷ್ಟು ಹಣ ನೀಡಿದ್ದರೂ ಸಮಯಕ್ಕೆ ಸರಿಯಾಗಿ ಮನೆಯನ್ನು ಹಸ್ತಾಂತರಿಸಲಾಗಿಲ್ಲ ಎಂದು ಗೆಮ್ಮಾ ಜೋಸೇಫ್ ಎಂಬುವವರು ದೂರು ನೀಡಿದ್ದಾರೆ.
ಜೆಮ್ಮಾ ಜೋಸೆಫ್ ಕೋಝಿಕ್ಕೋಡ್‌ನಲ್ಲಿ ಬಿಲ್ಡರ್‌ನಿಂದ 1,012 ಚದರ ಅಡಿ ಫ್ಲಾಟ್ ಖರೀದಿಸಿದರು. ಜೋಸೆಫ್ ಒಟ್ಟು ರೂ. 46 ಲಕ್ಷ ಪಾವತಿಸಿದ್ದಾರೆ. ಆದರೆ, ಬಿಲ್ಡರ್ ಜೋಸೆಫ್ ಗೆ ಫ್ಲಾಟ್ ಹಸ್ತಾಂತರಿಸಿರಲಿಲ್ಲ. ಇದರ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸಿದ್ಧ ಪಿ ಟಿ ಉಷಾ ಮೂಲಕ ಬಿಲ್ಡರ್‌ಗೆ ಇಷ್ಟೆಲ್ಲ ಹಣವನ್ನು ಪಾವತಿಸಿದ್ದಾರೆ, ಆದರೆ ಫ್ಲಾಟ್ ವಿತರಣೆಯಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಜೋಸೆಫ್ ದೂರಿದ್ದಾರೆ.
ಉಷಾ ಬಿಲ್ಡರ್ ಜೊತೆ ಸೇರಿ ತನಗೆ ಮೋಸ ಮಾಡಿದ್ದಾರೆ ಎಂದು ಜೋಸೆಫ್ ಆರೋಪಿಸಿದ್ದಾರೆ. ಆಕೆಯ ದೂರನ್ನು ಕೋಝಿಕ್ಕೋಡ್ ಪೊಲೀಸ್ ಮುಖ್ಯಸ್ಥ ಎವಿ ಜಾರ್ಜ್ ಅವರಿಗೆ ವಿವರವಾದ ವಿಚಾರಣೆಗಾಗಿ ಕಳುಹಿಸಲಾಗಿದೆ. ದೂರುದಾರರು ಕೇರಳ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಮೊರೆ ಹೋಗಿದ್ದು, ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. ಆದರೆ, ಬಿಲ್ಡರ್ ಆಗಲಿ, ಪಿಟಿ ಉಷಾ ಆಗಲಿ ಹಣ ಮರುಪಾವತಿ ಮಾಡಲು ಒಪ್ಪಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದೇ ವೇಳೆ ಉಷಾ ಸೇರಿ ಆರು ಮಂದಿ ವಿರುದ್ಧ ಐಪಿಸಿ 420ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಶೀಘ್ರದಲ್ಲೇ ತನಿಖೆ ಆರಂಭವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಲ್ಡರ್ ಗಳ ಮೇಲೆ ನಿಗಾ ಇಡುವ ಕೇರಳ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.








