ಭಾರತದ ಆರ್ಥಿಕತೆ ತೀರಾ ಹದಗೆಟ್ಟಿದೆ : ಮಮತಾ ಬ್ಯಾನರ್ಜಿ ಮುಖ್ಯ ಸಲಹೆಗಾರ ಅಮಿತ್ ಮಿತ್ರಾ
ಭಾರತದಲ್ಲಿನ ಆರ್ಥಿಕ ಪರಿಸ್ಥಿತಿ ತೀರ ಹದಗೆಡುತ್ತಿದೆ.. ಹಣದುಬ್ಬರದ ಏರಿಕೆಗೆ ಅನುಗುಣವಾಗಿ ಉದ್ಯೋಗ ಪ್ರಮಾಣ ಮತ್ತು ಆರ್ಥಿಕ ಬೇಡಿಕೆ ಹೆಚ್ಚದಿರುವ ಬಿಕ್ಕಟ್ಟಿನ ಸ್ಥಿತಿಯತ್ತ ಭಾರತ ಸಾಗುತ್ತಿದೆ ಎಂದು ಪಶ್ಚಿಮ ಬಂಗಾಳದ ಹಣಕಾಸು ಸಚಿವ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮುಖ್ಯ ಸಲಹೆಗಾರ ಅಮಿತ್ ಮಿತ್ರಾ ಕಳವಳ ವ್ಯಕ್ತಪಡಿಸಿದ್ದಾರೆ.
ಇನ್ಸ್ ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟಂಟ್ಸ್ ಆಫ್ ಇಂಡಿಯಾ ಆಯೋಜಿಸಿದ್ದ ಮುಖ್ಯ ಆರ್ಥಿಕ ಅಧಿಕಾರಿಗಳ ವರ್ಚುವಲ್ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿರುವ ಅಮಿತ್ ಮಿತ್ರಾ ,, ದೇಶವು ಈಗಾಗಲೇ ಅತಿಯಾದ ಹಣದುಬ್ಬರ ಮತ್ತು ನಿರುದ್ಯೋಗದ ಏರಿಕೆಯಿಂದ ಬಳಲುತ್ತಿದೆ, ದೇಶದ ಒಟ್ಟಾರೆ ಹಣದುಬ್ಬರ ಪ್ರಮಾಣ ಶೇ 14.2 ರಷ್ಟಿದೆ. ನಿರುದ್ಯೋಗ ಪ್ರಮಾಣ ಶೇ 10.48 ರಷ್ಟು ಹೆಚ್ಚಾಗಿದೆ. ಇದೀಗ ಖಾಸಗಿ ವಲಯದ ಹೂಡಿಕೆ ಹೆಚ್ಚಳವಾಗದೇ ನಿಶ್ಚಲತೆಯತ್ತ ಸಾಗುತ್ತಿದ್ದೇವೆ ಎಂದು ಹೇಳಿದ್ದಾರೆ.
ಪಾಕಿಸ್ತಾನ : ಹಿಂದೂ ದೇವರ ಮೂರ್ತಿಗಳನ್ನ ಭಗ್ನಗೊಳಿಸಿದ ಕಿಡಿಗೇಡಿ
2016ರಲ್ಲಿ ನೋಟು ರದ್ದು ಮಾಡಿದ್ದು ಮತ್ತು ಜಿಎಸ್‌ಟಿ ಜಾರಿ ಗೊಳಿಸುವುದರೊಂದಿಗೆ ಆರಂಭವಾದ ಕೇಂದ್ರ ಸರ್ಕಾರದ ದೋಷಪೂರಿತ ಆರ್ಥಿಕ ನೀತಿಗಳಿಂದಾಗಿ ಭಾರತವು ಇಂತಹ ಕೆಟ್ಟ ಸನ್ನಿವೇಶವನ್ನು ಎದುರಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿ ಆರ್ಥಿಕತೆಯನ್ನು ಮುನ್ನಡೆಸಲು ಜಾರಿಗೊಳಿಸಿದ ತಪ್ಪಾದ ನೀತಿಗಳು ಖಾಸಗಿ ಹೂಡಿಕೆ ಅಥವಾ ಜನರು ಸ್ವ–ಉದ್ಯೋಗದತ್ತ ತೊಡಗಿಕೊಳ್ಳಲು ಉತ್ತೇಜನ ನೀಡಲು ವಿಫವಾಗಿವೆ ಎಂದು ಆರೋಪಿಸಿದ್ದಾರೆ.
ಅಷ್ಟೇ ಅಲ್ಲ ಇದೇ ವೇಳೆ ಅವರು ಪಶ್ಚಿಮ ಬಂಗಾಳದಲ್ಲಿ ಸರಿಯಾದ ನೀತಿಯನ್ನು ಅಳವಡಿಸಿಕೊಂಡಿರುವುದರ ಪರಿಣಾಮ ರಾಜ್ಯದ ಜಿಡಿಪಿ ಬೆಳವಣಿಗೆ ಧನಾತ್ಮಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಾತನಾಡಿರೋ ಅಮಿತ್ ಮಿತ್ರಾ , ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ಸಲುವಾಗಿ ಹಲವು ದೇಶಗಳು ಜನರಿಗೆ ನೇರವಾಗಿ ಹಣ ನೀಡಿವೆ. ಆದರೆ ಭಾರತದಲ್ಲಿ ಮಾತ್ರ ಅಂತಹ ಕೆಲಸ ಆಗಲಿಲ್ಲ ಎಂದು ಆಕ್ರೋಶ ಹೊರಹಾಕಿದ್ಧಾರೆ.








