ಮತಾಂತರ ನಿಷೇಧ ವಿಧೇಯಕ | ಸಿದ್ದರಾಮಯ್ಯ – ಬಿಜೆಪಿ ಟ್ವೀಟ್ ವಾರ್
ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರ ಸದನದಲ್ಲಿ ಮತಾಂತರ ನಿಷೇಧ ವಿಧೇಯಕವನ್ನು ಮಂಡಿಸಿ ಅಂಗೀಕರಿಸಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಬಿಜೆಪಿ ನಡುವೆ ಟ್ವೀಟ್ ವಾರ್ ನಡೆಸಿದೆ.
ರಾಜ್ಯದಲ್ಲಿ #AntiConversionBill ಜಾರಿಗೊಳಿಸಲು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರಯತ್ನ ನಡೆಸಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮತಾಂತರದ ವಿರುದ್ಧವಾಗಿ ಕರಡು ಸಿದ್ದಪಡಿಸಲು ಸೂಚನೆ ನೀಡಿ, ಕಾನೂನು ಇಲಾಖೆ ಸಿದ್ಧಪಡಿಸಿದ್ದ ಮಸೂದೆಗೆ ಸಹಿ ಕೂಡಾ ಮಾಡಿದ್ದರು. ಈಗ ಯಾವ ಕಾರಣಕ್ಕಾಗಿ ವಿರೋಧಿಸುತ್ತಿದ್ದೀರಿ ಎಂದು ಬಿಜೆಪಿ ಪ್ರಶ್ನಿಸಿದೆ.
ಇದಕ್ಕೆ ಟ್ವಟ್ಟರ್ ನಲ್ಲಿ ಪ್ರತಿಕ್ರಿಯೆ ಕೊಟ್ಟಿರುವ ಸಿದ್ದರಾಮಯ್ಯ, ನಮ್ಮ ಸರ್ಕಾರದ ಅವಧಿಯಲ್ಲಿ ಮತಾಂತರ ನಿಷೇಧ ಕಾಯ್ದೆಯ ಕರಡು ಸಂಪುಟದಲ್ಲಿ ಚರ್ಚೆಯೂ ಆಗಿಲ್ಲ, ಅನುಮೋದನೆಯೂ ಆಗಿಲ್ಲ. ಕೇವಲ ಸಂಪುಟದ ಚರ್ಚೆಗೆ ತನ್ನಿ ಎಂದು ಸಹಿ ಹಾಕಿದ ಕಡತಗಳೆಲ್ಲವೂ ಸರ್ಕಾರದ ನಿಲುವು ಆಗುವುದಿಲ್ಲ.
ಸಂಸದೀಯ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಎಂದರೆ ಸಮಾನರಲ್ಲಿ ಮೊದಲಿಗ ಎಂಬ ವ್ಯಾಖ್ಯಾನವಿದೆ. ಮುಖ್ಯಮಂತ್ರಿಯಾಗಿ ನಾನೊಬ್ಬನೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಬರಲ್ಲ, ಕರಡು ಪ್ರತಿ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿ ಎಂಬ ಕಾರಣಕ್ಕೆ ಸಹಿ ಮಾಡಿದ್ದೆ. ಸಹಿ ಮಾಡಿದ ಮಾತ್ರಕ್ಕೆ ಒಪ್ಪಿದ್ದೆ ಎಂದಲ್ಲ.
ಸದನದಲ್ಲಿ ಮಂಡಿಸಲಾದ #AntiConversionBill ನಲ್ಲಿ ಎಲ್ಲಿಯೂ ಕೂಡಾ ನಿರ್ಧಿಷ್ಟವಾಗಿ ಯಾವುದೇ ಧರ್ಮ, ಮತವನ್ನು ಉಲ್ಲೇಖಿಸಿಲ್ಲ.
ಆದರೂ ಕೆಪಿಸಿಸಿ ಅಧ್ಯಕ್ಷ @DKShivakumar ಕ್ರೈಸ್ತರನ್ನು ಕಾಯ್ದೆಗೆ ಸಮೀಕರಿಸುತ್ತಿದ್ದಾರೆ.
ಡಿಕೆಶಿಯವರೇ, ನೀವ್ಯಾಕೆ ಕ್ರೈಸ್ತರತ್ತ ಬೊಟ್ಟು ಮಾಡುತ್ತೀರಿ?
— BJP Karnataka (@BJP4Karnataka) December 23, 2021
ನಾನು ಮತಾಂತರ ನಿಷೇಧ ಕಾಯಿದೆಯ ಕಡತವನ್ನು ಸಂಪುಟದ ಮುಂದೆ ತರುವಂತೆ ಸಹಿ ಹಾಕಿದ್ದು 2015 ರ ನವೆಂಬರ್ ತಿಂಗಳಿನಲ್ಲಿ. ಇದಾಗಿ ಎರಡೂವರೆ ವರ್ಷ ನಾವು ಅಧಿಕಾರದಲ್ಲಿ ಇದ್ದರೂ ಒಮ್ಮೆಯೂ ಅದನ್ನು ಸಂಪುಟದ ಮುಂದೆ ತರುವ ಪ್ರಯತ್ನ ಮಾಡಲಿಲ್ಲ. ಕಾರಣ ನಮ್ಮ ಸರ್ಕಾರಕ್ಕೆ ಇಂಥಾ ಮಸೂದೆಯ ಬಗ್ಗೆ ಆಸಕ್ತಿ ಇರಲಿಲ್ಲ.
ಮತಾಂತರ ನಿಷೇಧ ಕುರಿತ ಈ ಹಿಂದಿನ ಕರಡು ಪ್ರತಿಗೂ, ಈಗಿನ ಮಸೂದೆಗೂ ಇರುವ ಪ್ರಮುಖ ವ್ಯತ್ಯಾಸಗಳೆಂದರೆ. ಮೊದಲನೆಯದು ಹಿಂದಿನ ಕರಡು ಪ್ರತಿಯ ನಿಯಮ 3ರಲ್ಲಿ ವಿವಾಹ ಎಂಬ ಪದ ಬಳಕೆ ಇರಲಿಲ್ಲ. ಬಿಜೆಪಿ ಯವರು ತಮ್ಮ ಕಾಯ್ದೆಯಲ್ಲಿ ವಿವಾಹವನ್ನು ಹೊಸದಾಗಿ ಸೇರಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಪ್ರಕಾರ ಸಾಕ್ಷಾಧಾರಗಳ ಕೊರತೆ ಕಂಡುಬಂದರೆ ಆರೋಪಿಯನ್ನು ತಪ್ಪಿತಸ್ಥ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ ಈ ಹೊಸ ಮಸೂದೆಯ ನಿಯಮ 12 ರ ಪ್ರಕಾರ ಸಾಕ್ಷಾಧಾರ ಕೊರತೆ ಇದ್ದರೂ ಅದು ದೂರುದಾರನಿಗೆ ಅನುಕೂಲ ಮಾಡಿಕೊಡಲಿದೆ. ಹೀಗಾಗಿ ಇದು ಕಾನೂನಿನ ನಿಯಮಗಳಿಗೆ ವಿರುದ್ಧವಾಗಿದೆ.
ಸಂವಿಧಾನದ 21 ಮತ್ತು 25ನೇ ವಿಧಿಯನ್ವಯ ಒಬ್ಬ ವ್ಯಕ್ತಿ ತನಗಿಷ್ಟವಾದ (ಯಾವುದೇ ಧರ್ಮಕ್ಕೆ ಸೇರಿದವರಾದರೂ ಸರಿ) ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಲು ಸಂಪೂರ್ಣ ಸ್ವಾತಂತ್ರ್ಯ ನೀಡಿರುವಾಗ, ಅದನ್ನು ಬೇಡ ಎನ್ನಲು ಸರ್ಕಾರಕ್ಕೇನು ಹಕ್ಕಿದೆ?
ಇದೇ ಕಾರಣಕ್ಕೆ ಗುಜರಾತ್ ಸರ್ಕಾರ ಜಾರಿಗೊಳಿಸಲು ಹೊರಟಿದ್ದ ಮತಾಂತರ ನಿಷೇಧ ಕಾಯ್ದೆಗೆ ತಡೆಯಾಜ್ಞೆ ನೀಡಿರುವ ಗುಜರಾತ್ ಹೈಕೋರ್ಟ್, ಅಲ್ಲಿನ ಸರ್ಕಾರಕ್ಕೆ ಛೀಮಾರಿ ಹಾಕಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.








