ಹೊಸ ವರ್ಷಕ್ಕೆ ನೂತನ ಸಿಎಂ | ತಿಂಗಳ ಅಂತ್ಯಕ್ಕೆ ಬೊಮ್ಮಾಯಿ ರಾಜೀನಾಮೆ..? Bommai resign saaksha tv
ನವದೆಹಲಿ : ಕೊರೊನಾ ಸೋಂಕಿನ ಆತಂಕದ ಮಧ್ಯೆ ಹೊಸ ವರ್ಷಕ್ಕೆ ರಾಜ್ಯ ಸಜ್ಜಾಗುತ್ತಿದೆ. ಈ ಮಧ್ಯೆ ಬಸವರಾಜ ಬೊಮ್ಮಾಯಿ ಅವರು ವರ್ಷಾಂತ್ಯಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದೆ.
ಇದೇ ತಿಂಗಳ 28 ಮತ್ತು 29 ರಂದು ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆ ನಡೆಯಲಿದ್ದು, ಇಲ್ಲಿ ಸಿಎಂ ಸ್ಥಾನದಲ್ಲಿ ಬೊಮ್ಮಾಯಿ ಅವರನ್ನು ಮುಂದುವರೆಸಬೇಕೋ..? ಬೇಡವೋ ಎಂಬ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆಯಂತೆ.
ಮೂಲಗಳ ಪ್ರಕಾರ ಬೊಮ್ಮಾಯಿ ಅವರು ಮಂಡಿ ನೋವಿನ ಶಸ್ತ್ರಚಿಕಿತ್ಸೆಗೆ ವಿದೇಶಕ್ಕೆ ತೆರಳುತ್ತಿದ್ದು, ಇದೇ ನೆಪವಾಗಿಟ್ಟುಕೊಂಡು ಅವರಿಗೆ ರಾಜೀನಾಮೆ ಪಡೆಯಲು ಹೈಕಮಾಂಡ್ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕಾಗಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಜ್ಯ ಬಿಜೆಪ ಕಾರ್ಯಕಾರಣಿ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾಗಿಯಾಗಲಿದ್ದಾರೆ.
ಸಾಮಾನ್ಯವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸುವುದಿಲ್ಲ. ಆದ್ರೂ ಜೆ.ಪಿ.ನಡ್ಡಾ ಅವರು 28 ರಂದು ನಡೆಯಲಿರುವ ಕಾರ್ಯಕಾರಣಿ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ.
ಸಭೆಯಲ್ಲಿ ಜೆ.ಪಿ.ನಡ್ಡಾ ಬಿಜೆಪಿ ಶಾಸಕರು, ಸಚಿವರು, ಹಿರಿಯ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ. ಈ ವೇಳೆ ಬೊಮ್ಮಾಯಿ ಆಡಳಿತ ವೈಖರಿ ಬಗ್ಗೆಯೂ ಮಾಹಿತಿ ಸಂಗ್ರಹಿಸಲಿದ್ದಾರಂತೆ. ಬಳಿಕ ಶಾಸಕರ ಸಹಿ ಸಂಗ್ರಹ ಮಾಡಿ ರಾಜೀನಾಮೆ ವಿಚಾರವಾಗಿ ಒಂದು ನಿರ್ಧಾರಕ್ಕೆ ಬರಲಿದ್ದಾರೆ.









