ಎ ಪಿ ಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, 50 ರೂ ಗೆ ಮದ್ಯ ಮಾರಾಟ…
ವಿಜಯವಾಡ: ಆಂಧ್ರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕ್ವಾರ್ಟರ್ ಬಾಟಲಿಗೆ 50 ರೂ.ಗೆ ಗುಣಮಟ್ಟದ ಮದ್ಯ ಪೂರೈಸುವುದಾಗಿ ಆಂದ್ರಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಸೋಮು ವೀರರಾಜು ಮಂಗಳವಾರ ಭರವಸೆ ನೀಡಿದ್ದಾರೆ. ಸದ್ಯ ಗುಣಮಟ್ಟದ ಕ್ವಾರ್ಟರ್ ಬಾಟಲ್ 200 ರೂ.ಗೂ ಅಧಿಕ ಬೆಲೆಯಲ್ಲಿ ಮಾರಾಟವಾಗುತ್ತಿದೆ.
ಮಂಗಳವಾರ ಇಲ್ಲಿ ನಡೆದ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ವೀರರಾಜು, ‘ಕಳಪೆ’ ಗುಣಮಟ್ಟದ ಮದ್ಯವನ್ನು ಜನರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಎಲ್ಲಾ ನಕಲಿ ಬ್ರ್ಯಾಂಡ್‌ಗಳು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತವೆ, ಆದರೆ ತಿಳಿದಿರುವ ಮತ್ತು ಜನಪ್ರಿಯ ಬ್ರಾಂಡ್‌ಗಳು ಲಭ್ಯವಿಲ್ಲ ಎಂದು ಅವರು ಆರೋಪಿಸಿದರು.
ರಾಜ್ಯದಲ್ಲಿ ಪ್ರತಿಯೊಬ್ಬರು ತಿಂಗಳಿಗೆ 12 ಸಾವಿರ ರೂ.ಗಳನ್ನು ಮದ್ಯಕ್ಕಾಗಿ ವ್ಯಯಿಸುತ್ತಿದ್ದು, ಅದನ್ನು ಮತ್ತೆ ಸರ್ಕಾರ ಒಂದಲ್ಲ ಒಂದು ಯೋಜನೆ ಹೆಸರಿನಲ್ಲಿ ನೀಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವೇದಿಕೆಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಒಂದು ಕೋಟಿ ಜನರು ಮದ್ಯ ಸೇವಿಸುತ್ತಿದ್ದು, 2024ರ ಚುನಾವಣೆಯಲ್ಲಿ ಆ ಒಂದು ಕೋಟಿ ಜನರು ಬಿಜೆಪಿಗೆ ಮತ ಹಾಕಬೇಕೆಂದು ವೀರರಾಜು ಹೇಳಿದರು. ಪ್ರತಿ ಬಾಟಲಿಗೆ 75 ರೂ.ಗೆ ‘ಗುಣಮಟ್ಟದ’ ಮದ್ಯವನ್ನು ನೀಡಲಾಗುವುದು ಮತ್ತು ಆದಾಯ ಸುಧಾರಿಸಿದರೆ ಬಾಟಲಿಗೆ 50 ರೂ.ಗೆ ಮಾರಾಟ ಮಾಡಲಾಗುವುದು ಎಂದು ಭರವಸೆ ನೀಡಿದರು.
ಆಡಳಿತ ಪಕ್ಷದ ನಾಯಕರು ಸರ್ಕಾರಕ್ಕೆ ಅಗ್ಗದ ಮದ್ಯವನ್ನು ಪೂರೈಸುವ ಮದ್ಯದ ಕಾರ್ಖಾನೆಗಳನ್ನು ಹೊಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಆರೋಪಿಸಿದರು.